ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿಂದ ಮಂಗಳೂರಿಗೆ ಆಗಮಿಸಿ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಪರ, ಹಿಂದೂಗಳ ರಕ್ಷಣೆ ಮಾಡುವ ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನನಗೂ ಮಾನಸಿಕವಾಗಿ ನೋವಾಗಿದೆ. ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಭಾವನಾತ್ಮಕವಾಗಿ ಹೇಳಿದ್ದೆ. ಆದರೆ ಪಕ್ಷದ ಹಿರಿಯರು ಆ ಹಂತಕ್ಕೆ ಹೋಗುವುದು ಬೇಡ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಮುಂದುವರಿಸಿಲ್ಲ ಎಂದರು.
ಅಡ್ಡಮತದಾನದ ಹಿಂದೆ ತಾವು ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯ ಸಂಬಂಧವಿದೆ ಎಂಬ ಆರೋಪವನ್ನು ವಿಜಯೇಂದ್ರ ತಳ್ಳಿಹಾಕಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ರಾಜ್ಯಾಧ್ಯಕ್ಷನ ಜವಾಬ್ದಾರಿ ಸಿಕ್ಕಿದ್ದು, ಪಕ್ಷಕ್ಕೆ ದ್ರೋಹ ಮಾಡುವ ಅಥವಾ ಕೀಳುಮಟ್ಟದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವಿವಿಧ ಹೆಸರುಗಳನ್ನು ತೇಲಿಬಿಟ್ಟು ಬಿಜೆಪಿ ಶಾಸಕರ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೊಳಗೂ ಅನುಮಾನದ ವಾತಾವರಣ ನಿರ್ಮಾಣವಾಗಿರುವುದು ನಿಜ. ಆದರೆ ಸತ್ಯ ಇಂದು ಅಲ್ಲದಿದ್ದರೂ ನಾಳೆ ಹೊರಬರುತ್ತದೆ. ಕೇಂದ್ರ ನಾಯಕತ್ವಕ್ಕೂ ಎಲ್ಲ ಮಾಹಿತಿ ಇದೆ. ನನಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದು ತಿಳಿಸಿದರು.
ಎಸ್.ಟಿ. ಸೋಮಶೇಖರ್ ಬಿಜೆಪಿ ಮೂರು ಶಾಸಕರ ಜೊತೆಗೆ ಸಂಪರ್ಕದಲ್ಲಿದ್ದರು. ಅಡ್ಡಮತದಾನದ ಕುರಿತು ಮಾಹಿತಿ ಮತದಾನದ ಬಳಿಕವೇ ತಿಳಿದುಬಂದಿತ್ತು ಎಂದರು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬಲಾಗುವುದು. ಕಾರ್ಯಕರ್ತರ ಶಕ್ತಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಜನವಿರೋಧಿ ಹಾಗೂ ರೈತವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಜನರ ಬೆಂಬಲದೊಂದಿಗೆ ಅಧಿಕಾರದಿಂದ ಕೆಳಗಿಳಿಸುವ ವಿಶ್ವಾಸವಿದೆ ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಭಕ್ತನಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಸಮಯ ಬಂದಾಗ ಎಲ್ಲ ಸತ್ಯವೂ ಹೊರಬರುತ್ತದೆ. ಎಲ್ಲವನ್ನೂ ಕಾಲವೇ ಉತ್ತರಿಸುತ್ತದೆ ಎಂದರು.