ಕಡಬ, ಜೂನ್ 27:
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹25 ಕೋಟಿ ವಿಶೇಷ ಅಭಿವೃದ್ಧಿ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಎಸಗಿ ಸಾರ್ವಜನಿಕ ಹಣ ದುರ್ಬಳಕೆ ಮಾಡಲಾಗಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಆರೋಪಿಸಿದರು.
ಶುಕ್ರವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲದೆ ಬಿಜೆಪಿ ಮುಖಂಡರು, ಬಿಜೆಪಿ ಬೆಂಬಲಿತ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳ ಶಿಫಾರಸ್ಸಿನ ಮೇರೆಗೆ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಅಗತ್ಯವಿರುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕಡೆಗಣಿಸಿರುವುದರಿಂದ ಕಡಬ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ದೂರಿದರು.
ಕಡಬದ ಸರಸ್ವತಿ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನದಿಂದ ಸುಮಾರು ₹50 ಲಕ್ಷ ಮಂಜೂರಾಗಿದೆ ಎಂಬ ಮಾಹಿತಿ ಇದೆ. ಇದೇ ಶಾಲೆಯ ತಡೆಗೋಡೆ ನಿರ್ಮಾಣಕ್ಕೂ ಈ ಹಿಂದೆ ಸರ್ಕಾರಿ ಅನುದಾನ ನೀಡಲಾಗಿದ್ದು, ನಿರ್ಮಾಣಗೊಂಡ ತಡೆಗೋಡೆ ಬಳಿಕ ಕುಸಿದಿದೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಸರ್ಕಾರಿ ಅನುದಾನ ನೀಡಿರುವ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿ ಸಮಗ್ರ ತನಿಖೆ ನಡೆಸಿ, ಯಾವುದೇ ಲೋಪದೋಷ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಡಬ ತಾಲೂಕಿನಲ್ಲಿ 118 ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲೆಗಳಿದ್ದು, ಸುಮಾರು 8,358 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳಾಗಿದ್ದಾರೆ. ಈ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದರೂ ಅವುಗಳನ್ನು ನಿರ್ಲಕ್ಷಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ಸರ್ಕಾರ ಬಿಡುಗಡೆ ಮಾಡಿರುವ ವಿಶೇಷ ಅನುದಾನದ ಹಂಚಿಕೆ ಹಾಗೂ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಿ, ಸಾರ್ವಜನಿಕ ಹಣದ ದುರ್ಬಳಕೆ ನಡೆದಿರುವುದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕ್ಸೇವಿಯರ್ ಬೇಬಿ, ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಮೇಲಿನಮನೆ, ಎಸ್‌ಸಿ ಘಟಕದ ಅಧ್ಯಕ್ಷ ಶಶಿಧರ ಬೊಟ್ಟಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಾಕಿರ್, ಸೇವಾದಳದ ಅಧ್ಯಕ್ಷ ಸುಜಿತ್ ಪಿ.ಕೆ., ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಧೀರ್ ದೇವಾಡಿಗ ಸೇರಿದಂತೆ ಇತರರು ಉಪಸ್ಥಿತರಿದ್ದರು.