ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀದಿಬದಿ ವ್ಯಾಪಾರಸ್ಥರನ್ನು ಯಾವುದೇ ಮಾನವೀಯತೆ ಇಲ್ಲದೆ ತೆರವುಗೊಳಿಸಿರುವ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಮಂಗಳೂರು ನಗರ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಉಪಾಧ್ಯಕ್ಷ ಇರ್ಫಾನ್ ಕಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥರು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಸಣ್ಣ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಜೀವನೋಪಾಯವನ್ನು ಕಸಿದುಕೊಳ್ಳುವ ರೀತಿಯಲ್ಲಿ ಏಕಾಏಕಿ ತೆರವು ಕಾರ್ಯಾಚರಣೆ ನಡೆಸುವುದು ಮಾನವೀಯವಲ್ಲ. ಇತ್ತೀಚಿನ ತೆರವು ಕಾರ್ಯಾಚರಣೆ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ ಕೆಲವು ವ್ಯಕ್ತಿಗಳ ವೈಯುಕ್ತಿಕ ದ್ವೇಷಕ್ಕೆ ಬಡ ಬಿದಿಬದಿ ವ್ಯಾಪಾರಸ್ಥರು ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಹಾಗೂ ಕೆಲವು ವ್ಯಾಪಾರಸ್ಥರು ಪೂರ್ವ ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ನೀಡದೇ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅವರ ಮೇಲೆ ದಬ್ಬಾಳಿಕೆಯ ಕ್ರಮ ಕೈಗೊಳ್ಳುವುದು ಸರಿಯಲ್ಲ. ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ, 2014ರ ಆಶಯಕ್ಕೆ ಅನುಗುಣವಾಗಿ ಅರ್ಹ ವ್ಯಾಪಾರಿಗಳಿಗೆ ರಕ್ಷಣೆ, ಗುರುತಿನ ಚೀಟಿ, ನಿಗದಿತ ವ್ಯಾಪಾರ ವಲಯ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಮಂಗಳೂರು ಮಹಾನಗರ ಪಾಲಿಕೆ ಕೂಡಲೇ ಈ ಅಮಾನವೀಯ ಕ್ರಮವನ್ನು ನಿಲ್ಲಿಸಿ, ತೆರವುಗೊಳಿಸಲಾದ ಎಲ್ಲಾ ಬೀದಿಬದಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿ ಅವರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಎಸ್.ಡಿ.ಟಿ.ಯು ಬೀದಿಬದಿ ವ್ಯಾಪಾರಸ್ಥರ ಪರವಾಗಿ ಹೋರಾಟವನ್ನು ನಡೆಸಲಿಕ್ಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


