ಉಳ್ಳಾಲ: ಪವಿತ್ರ ಚಾರ್ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲದ ವ್ಯಕ್ತಿಯೊಬ್ಬರು ಉತ್ತರಾಖಂಡದ ಯಮುನೋತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಮೃತರು. ಸೆ.18ರಂದು ಉಳ್ಳಾಲದ 14 ಮಂದಿ ಸಹಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲಿನಲ್ಲಿ ಚಾರ್ಧಾಮ್ ಯಾತ್ರೆ ಆರಂಭಿಸಿದ್ದ ಅವರು, ಉತ್ತರ ಭಾರತದ ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಸೋಮವಾರ ಉತ್ತರಾಖಂಡ ತಲುಪಿದ್ದರು.

ಮಂಗಳವಾರ ಬೆಳಗ್ಗೆ ಯಮುನೋತ್ರಿ ಕ್ಷೇತ್ರದಲ್ಲಿ ಸುಮಾರು ಏಳು ಕಿ.ಮೀ. ಪಾದಯಾತ್ರೆ ನಡೆಸಿದ ಬಳಿಕ ರಾಜೇಶ್ ಅವರು ಕ್ಷೇತ್ರದ ಆವರಣದಲ್ಲಿದ್ದ ಕುರ್ಚಿಯಲ್ಲಿ ಕುಳಿತಿದ್ದಾಗ ಹಠಾತ್ತನೆ ಕುಸಿದುಬಿದ್ದರೆನ್ನಲಾಗಿದೆ. ಸಹಯಾತ್ರಿಕರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ದಾರಿಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಉತ್ತರಾಖಂಡದ ಡೆಹ್ರಾಡೂನ್‌ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವೆಲ್ಡರ್ ಆಗಿದ್ದ ರಾಜೇಶ್ ಅವರು ಜಪ್ಪಿನಮೊಗರುವಿನಲ್ಲಿ ಸ್ವಂತ ವರ್ಕ್‌ಶಾಪ್ ನಡೆಸುತ್ತಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.


