ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ಬಿ.ಎಲ್.ಎ.ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು – ಐವನ್ ಡಿ’ಸೋಜಾ

ಮಂಗಳೂರು: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (Special Intensive Revision–SIR) ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ಬೂತ್ ಲೆವೆಲ್ ಏಜೆಂಟ್‌ಗಳ (BLA) ಹಾಗೂ ಸಂಯೋಜಕರ ಸಭೆ ನಡೆಸಿ, ಬಿ.ಎಲ್.ಎ.ಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ, ಚುನಾವಣಾ ಆಯೋಗದ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ.ಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಚುನಾವಣಾ ಆಯೋಗದ ಬೂತ್ ಲೆವೆಲ್ ಅಧಿಕಾರಿಗಳು (BLO) ಮನೆಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್ ವಿತರಿಸಲಿದ್ದು, ಈ ಪ್ರಕ್ರಿಯೆಯಲ್ಲಿ ಬಿ.ಎಲ್.ಎ.ಗಳು ಸಹಕಾರ ನೀಡಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯವನ್ನು ನಿರ್ಲಕ್ಷ್ಯವಿಲ್ಲದೆ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಸಭೆಗಳು ವಾರ್ಡ್ ಸಂಖ್ಯೆ 21 (ಪಡವು ಪಶ್ಚಿಮ), 35 (ಪಡವು ಸೆಂಟ್ರಲ್), 54 (ಜೆಪ್ಪಿನಮೊಗರು), 50 (ಅಳಪೆ) ಹಾಗೂ 47 (ಮಿಲಾಗ್ರಿಸ್) ವಾರ್ಡ್‌ಗಳಲ್ಲಿ ನಡೆದವು.

ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಅದೇ ವೇಳೆ ಅನರ್ಹರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಅಥವಾ ಬೇರೆ ರಾಜ್ಯದಲ್ಲಿಯೂ ಮತದಾನದ ಹಕ್ಕು ಹೊಂದಿದ್ದರೂ ಮಂಗಳೂರಿನಲ್ಲಿಯೂ ಹೆಸರು ನೋಂದಾಯಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಬಿ.ಎಲ್.ಒ.ಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ಮಂಗಳೂರು ನಗರದಲ್ಲಿ ಉದ್ಯೋಗ ಅಥವಾ ವ್ಯಾಪಾರದ ಉದ್ದೇಶಕ್ಕಾಗಿ ನೆಲೆಸಿರುವ ಕೆಲವರು ತಮ್ಮ ಮೂಲ ನಿವಾಸದಲ್ಲಿಯೂ ಹಾಗೂ ಮಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಸಂಗತಿಯಾಗಿದೆ. ಇಂತಹ ಪ್ರಕರಣಗಳನ್ನು ಗುರುತಿಸಿ ಫಾರಂ-7 ಮೂಲಕ ಅನರ್ಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಬಿ.ಎಲ್.ಎ.ಗಳು ಹಾಗೂ ಬಿ.ಎಲ್.ಒ.ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಐವನ್ ಡಿ’ಸೋಜಾ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಬಿ. ಸಾಲ್ಯಾನ್, ಚೇತನ್ ಕುಮಾರ್, ಭಾಸ್ಕರ್ ರಾವ್, ನಾಗೇಂದ್ರ ಕುಮಾರ್, ಹರ್ಬರ್ಟ್ ಡಿ’ಸೋಜಾ, ಶೇಸಮ್ಮ, ನೀತು ಡಿ’ಸೋಜಾ, ಮನೋರಾಜ್ ರಾಜೀವ್, ವೆಲ್ವಿನ್ ಕ್ಯಾಸ್ಟೆಲಿನೋ, ಪ್ರಶಾಂತ್ ಅಮೀನ್, ಸುಧಾಕರ್ ಜೋಗಿ, ಆಶಾಲತಾ, ಯಶವಂತ್, ಮೀನಾ ಟೆಲ್ಲಿಸ್, ಸ್ವಾತಿ ಕೇಶವ್, ಪ್ರಸಾದ್ ಕುಂದರ್, ಮೇರಿ ಪಿಂಟೋ, ದಯಾನಂದ್, ಅಭಿಷೇಕ್, ಅವಲಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!