ಎನ್‌ಸಿಇಆರ್‌ಟಿ 7ನೇ ತರಗತಿ ಪಠ್ಯದಲ್ಲಿ ರಾಣಿ ಅಬ್ಬಕ್ಕ: ಕನ್ನಡಿಗರಿಗೆ ಹೆಮ್ಮೆಯ ಕ್ಷಣ – ಕೆಆರ್‌ಎಂಎಸ್‌ಎಸ್


ವೀರವನಿತೆಯ ಜೀವನ ರಾಷ್ಟ್ರದ ವಿದ್ಯಾರ್ಥಿಗಳಿಗೆ ತಲುಪುವುದು ಐತಿಹಾಸಿಕ ಬೆಳವಣಿಗೆ; ಎನ್‌ಸಿಇಆರ್‌ಟಿಗೆ ಸಂಘಟನೆಗಳ ಅಭಿನಂದನೆ

ಬೆಂಗಳೂರು, ಜುಲೈ 1: ಕರ್ನಾಟಕದ ವೀರವನಿತೆ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳಾ ಹೋರಾಟಗಾರ್ತಿಯರಲ್ಲಿ ಒಬ್ಬರಾದ ರಾಣಿ ಅಬ್ಬಕ್ಕ ಅವರ ಜೀವನಾಧಾರಿತ ಪಾಠವನ್ನು ಎನ್‌ಸಿಇಆರ್‌ಟಿ 7ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಂಎಸ್‌ಎಸ್) ಹಾಗೂ ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ತಿಳಿಸಿವೆ.

ಈ ಐತಿಹಾಸಿಕ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿರುವ ಎರಡೂ ಸಂಘಟನೆಗಳು, ಎನ್‌ಸಿಇಆರ್‌ಟಿ ಹಾಗೂ ಈ ಕಾರ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿವೆ.

ಇಲ್ಲಿಯವರೆಗೆ ತುಳುನಾಡಿನ ಇತಿಹಾಸದ ಪುಟಗಳಲ್ಲಿ ಹೆಚ್ಚಾಗಿ ಪರಿಚಿತವಾಗಿದ್ದ ರಾಣಿ ಅಬ್ಬಕ್ಕ ಅವರ ಶೌರ್ಯ, ದೇಶಭಕ್ತಿ ಮತ್ತು ಪರಾಕ್ರಮ ಇದೀಗ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳಿಗೆ ತಲುಪಲಿರುವುದು ಸಂತಸದ ಬೆಳವಣಿಗೆಯಾಗಿದೆ. ಈ ಪಠ್ಯ ಸೇರ್ಪಡೆಯಿಂದ ದೇಶ-ವಿದೇಶದ ವಿದ್ಯಾರ್ಥಿಗಳು ರಾಣಿ ಅಬ್ಬಕ್ಕ ಅವರ ಜೀವನ, ಹೋರಾಟ ಮತ್ತು ಆದರ್ಶಗಳನ್ನು ಅರಿಯುವ ಅವಕಾಶ ದೊರೆತಿದ್ದು, ಇದು ಕನ್ನಡ ನಾಡಿನ ಇತಿಹಾಸಕ್ಕೆ ಸಂದ ಮಹತ್ವದ ಗೌರವವಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ, ಅವರ ಜೀವನ, ಹೋರಾಟ ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡಿರುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.

ಇದೇ ವೇಳೆ, ರಾಣಿ ಅಬ್ಬಕ್ಕ ಅವರ ಕುರಿತು ವಿಶೇಷ ಕೃತಿಯೊಂದನ್ನು ಪ್ರಕಟಿಸಿ, ಅವರ ಇತಿಹಾಸವನ್ನು ದಾಖಲಿಸುವ ಕಾರ್ಯವನ್ನೂ ಸಂಘಟನೆಗಳು ಯಶಸ್ವಿಯಾಗಿ ನಿರ್ವಹಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.

ರಾಣಿ ಅಬ್ಬಕ್ಕ ಅವರ ದೇಶಪ್ರೇಮ, ಸ್ವಾಭಿಮಾನ ಮತ್ತು ಧೈರ್ಯದ ಆದರ್ಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಅವರ ಜೀವನಗಾಥೆ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳಿಗೆ ತಲುಪುತ್ತಿರುವುದು ಕನ್ನಡ ನಾಡಿನ ಹಾಗೂ ತುಳುನಾಡಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘ ವ್ಯಕ್ತಪಡಿಸಿವೆ.

ಈ ವಿಷಯವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!