ಮಂಗಳೂರಿನ ಕಾಟಿಪಳ್ಳದಲ್ಲಿ 17 ವರ್ಷದ ಗರ್ಭಿಣಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆಗೆ ಒತ್ತಾಯ ಕೇಳಿಬಂದಿದೆ. ಈ ಕುರಿತು ಸುರತ್ಕಲ್ ಮಹಿಳಾ ಕಾಂಗ್ರೆಸ್ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿದ ಸುರತ್ಕಲ್ ಮಹಿಳಾ ಕಾಂಗ್ರೆಸ್ ನಿಯೋಗ, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿತು.

ತಪ್ಪಿತಸ್ಥ ಆರೋಪಿ ಮನೀಶ್ ಪೂಜಾರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್ ಸೇರಿದಂತೆ ಶಶಿಕಲಾ ಪದ್ಮನಾಭ, ಸಾರಿಕಾ ಪೂಜಾರಿ, ಅನಿತಾ, ಪದ್ಮ, ಅರ್ಚನಾ ಆಚಾರ್ಯ, ಜಮೀಳಾ, ಯಶೋದಾ ಹಾಗೂ ಪ್ರಮೀಳಾ ಉಪಸ್ಥಿತರಿದ್ದರು.

