ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ, ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಗೊಳಿಸುವ ಸಂಬಂಧ ರಾಜ್ಯ ಹೈಕೋರ್ಟ್ ಸೂಚನೆಯಂತೆ ಎರಡೂ ಕಡೆಯವರು ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಮಧ್ಯಸ್ಥಿಕೆ ಕೇಂದ್ರದಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ನಮಿತಾ, ಮತ್ತೊಂದೆಡೆ ಆರೋಪಿಯ ತಂದೆ ಪಿ.ಜಿ. ಜಗನ್ನಿವಾಸ ರಾವ್ ಮತ್ತು ಸಂಬಂಧಿಕರೊಬ್ಬರು ನೇರವಾಗಿ ಹಾಜರಾಗಿದ್ದರು. ಆರೋಪಿ ಕೃಷ್ಣ ಜೆ. ರಾವ್ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ತನ್ನ ಹೇಳಿಕೆ ನೀಡಿದರು.
ರಾಜ್ಯ ಹೈಕೋರ್ಟ್ ನೇಮಕ ಮಾಡಿದ್ದ ಮಧ್ಯಸ್ಥಿಕೆದಾರರಾದ ವಕೀಲೆ ಸುಶೀಲಾ ಅವರು ಎರಡೂ ಕಡೆಯವರ ಹೇಳಿಕೆ ದಾಖಲಿಸಿಕೊಂಡರು. ಮೊದಲ ಹಂತದಲ್ಲಿ ಉಭಯ ಪಕ್ಷಗಳನ್ನು ಒಟ್ಟಿಗೆ ಕರೆದು ಮಾತುಕತೆ ನಡೆಸಿದ ಅವರು, ಬಳಿಕ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆದ ಪ್ರಕ್ರಿಯೆಯ ಕುರಿತು ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗಲಿದ್ದು, ಅದರ ಆಧಾರದ ಮೇಲೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ನಿರ್ಧಾರವಾಗಲಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದ ಸಂದರ್ಭದಲ್ಲಿ, ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಜೂನ್ 19ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗುವಂತೆ ನಿರ್ದೇಶಿಸಿತ್ತು. ಅದರಂತೆ ಉಭಯ ಪಕ್ಷಗಳು ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ.


