ಸಮಗ್ರ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ಗುರುದ್ವಾರ ಮರುನಿರ್ಮಾಣಕ್ಕೆ ಭಾರತ ಒತ್ತಾಯ
ನವದೆಹಲಿ/ಇಸ್ಲಾಮಾಬಾದ್, ಜು. 2: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೂಖಾಬಾದ್‌ನಲ್ಲಿ ಸುಮಾರು 125 ವರ್ಷಗಳಷ್ಟು ಹಳೆಯದಾದ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಗೊಳಿಸಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಭಾರತ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದೆ.
ಪಾಕಿಸ್ತಾನದ ಅಧಿಕಾರಿಗಳ ಮಾಹಿತಿ ಪ್ರಕಾರ, ಜೂನ್ 24ರ ರಾತ್ರಿ ಸ್ಥಳೀಯ ಉದ್ಯಮಿಯೊಬ್ಬರು ಸಂಬಂಧಿತ ಇಲಾಖೆಯಿಂದ ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ ಗುರುದ್ವಾರವನ್ನು ನೆಲಸಮಗೊಳಿಸಿದ್ದಾರೆ. ಈ ಘಟನೆಗೆ ಅಲ್ಪಸಂಖ್ಯಾತ ಸಿಖ್ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದೆ.


ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಘಟನೆಯನ್ನು “ಅತ್ಯಂತ ಖಂಡನೀಯ ಹಾಗೂ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ” ಎಂದು ಬಣ್ಣಿಸಿದ್ದಾರೆ.
ಫರೂಖಾಬಾದ್‌ನಲ್ಲಿರುವ ಐತಿಹಾಸಿಕ ಹಾಗೂ ಪವಿತ್ರ ಗುರುದ್ವಾರದ ಧ್ವಂಸವು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಸ್ಥಳೀಯ ಆಡಳಿತ ಹಾಗೂ ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ವರದಿಗಳು ಮತ್ತಷ್ಟು ಕಳವಳ ಉಂಟುಮಾಡಿವೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು. ಅಲ್ಲದೆ, ಧ್ವಂಸಗೊಂಡ ಗುರುದ್ವಾರವನ್ನು ಶೀಘ್ರವೇ ಮರುನಿರ್ಮಿಸುವಂತೆ ಭಾರತ ಆಗ್ರಹಿಸಿದೆ.
ಇದೇ ವೇಳೆ, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅವರ ಪೂಜಾ ಸ್ಥಳಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಹೊಣೆಗಾರಿಕೆಯನ್ನು ಪಾಕಿಸ್ತಾನ ಸರ್ಕಾರ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದೆ.


