ಕೆರೆಬೈಲ್‌ನಲ್ಲಿ ಎಸ್ಟೇಟ್ ಆವರಣ ಗೋಡೆ ಕುಸಿದು ಮನೆ ನೆಲಸಮ; ಕುಟುಂಬ ಮೊದಲೇ ಸ್ಥಳಾಂತರಗೊಂಡಿದ್ದರಿಂದ ಭಾರೀ ದುರಂತ ತಪ್ಪಿತು

ನಿರಂತರ ಮಳೆಗೆ ಗೋಡೆ ಕುಸಿತ; ಅಪಾಯದ ವಲಯದಲ್ಲಿರುವ ಇತರ ಮನೆಗಳಿಗೂ ಭೀತಿ

ಮಂಗಳೂರು, ಜು. 2: ಕರಾವಳಿಯಲ್ಲಿ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಮೀಪದ ಕೆರೆಬೈಲ್‌ನಲ್ಲಿ ಖಾಸಗಿ ಎಸ್ಟೇಟ್‌ನ ಬೃಹತ್ ಆವರಣ ಗೋಡೆ ಕುಸಿದು ಪಕ್ಕದಲ್ಲಿದ್ದ ಮನೆ ಸಂಪೂರ್ಣ ನೆಲಸಮಗೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಪಾಯದ ಮುನ್ಸೂಚನೆ ಅರಿತು ಎರಡು ವಾರಗಳ ಹಿಂದೆಯೇ ಕುಟುಂಬ ಸ್ಥಳಾಂತರಗೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಅವರ ಮನೆ ಗೋಡೆ ಕುಸಿತದ ಹೊಡೆತಕ್ಕೆ ಸಂಪೂರ್ಣ ಧ್ವಂಸಗೊಂಡಿದೆ. ಡೆಲ್ಟಾ ಇನ್ಸಾಲೋಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿ. ಸಂಸ್ಥೆಯ ಮಾಲಕರಾದ ಅಹಮ್ಮದ್ ಮೊಯ್ದಿನ್ ಅವರ ಖಾಸಗಿ ಎಸ್ಟೇಟ್‌ನ ಎತ್ತರದ ಆವರಣ ಗೋಡೆ ಕಳೆದ ವರ್ಷದ ಭಾರೀ ಮಳೆಯಿಂದ ಬಿರುಕು ಬಿಟ್ಟು ಕಿಶೋರ್ ಅವರ ಮನೆಯತ್ತ ವಾಲಿ ನಿಂತಿತ್ತು.

ಈ ಕುರಿತು ಕಿಶೋರ್ ಅವರು ಉಳ್ಳಾಲ ನಗರಸಭೆಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಕಿಶೋರ್ ಅವರ ಕುಟುಂಬ ಸೇರಿದಂತೆ ಅಪಾಯದ ವಲಯದಲ್ಲಿದ್ದ ಸುಮಾರು ಹತ್ತು ಮನೆಗಳ ನಿವಾಸಿಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಗೋಡೆ ಸಂಪೂರ್ಣ ಕುಸಿದು ಕಿಶೋರ್ ಅವರ ಮನೆ ನೆಲಸಮಗೊಂಡಿದೆ.

ಗೋಡೆ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇರುವುದರಿಂದ ಕಿಶೋರ್ ಅವರು ತಾಯಿ ಶಕುಂತಳಾ, ಪತ್ನಿ ಭಾರತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎರಡು ವಾರಗಳ ಹಿಂದೆಯೇ ಮಂಗಳೂರಿನ ಕಾವೂರಿನಲ್ಲಿರುವ ಪತ್ನಿಯ ಮನೆಗೆ ಸ್ಥಳಾಂತರಗೊಂಡಿದ್ದರು. ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗೋಡೆ ಕಳೆದ ವರ್ಷವೇ ಅಪಾಯಕಾರಿಯಾಗಿ ವಾಲಿದ್ದರೂ ಅದನ್ನು ತೆರವುಗೊಳಿಸಲು ಅಥವಾ ಶಾಶ್ವತ ಪರಿಹಾರ ಕೈಗೊಳ್ಳುವಲ್ಲಿ ಉಳ್ಳಾಲ ನಗರಸಭೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡ ಪ್ರಕಾಶ್ ಪಿಂಟೊ ಮಾತನಾಡಿ, ಅಪಾಯದ ಪ್ರದೇಶದಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರಿಸಿದ ಅಧಿಕಾರಿಗಳು ಮನೆ ಬಾಡಿಗೆ ನೀಡುವುದಾಗಿ ಭರವಸೆ ನೀಡಿದ್ದರೂ, ಕೇವಲ ಎರಡು ಕುಟುಂಬಗಳಿಗೆ ಮಾತ್ರ ಒಂದು ತಿಂಗಳ ಬಾಡಿಗೆ ನೀಡಿ ಉಳಿದವರನ್ನು ನಿರ್ಲಕ್ಷಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಕಿಶೋರ್ ಅವರ ಮನೆ ನಾಶವಾಗಿದೆ ಎಂದು ಆರೋಪಿಸಿದರು.

ಎಸ್ಟೇಟ್‌ನ ಉಳಿದ ಆವರಣ ಗೋಡೆಯೂ ಕುಸಿಯುವ ಅಪಾಯದಲ್ಲಿದ್ದು, ಕಾಶಿನಾಥ್, ಮಣಿ, ರಝಾಕ್, ನಝೀರ್, ಅನ್ನು ರಾಜ ಕೊಟ್ಟಾರಿ ಹಾಗೂ ಸತ್ಯ ಅವರ ಮನೆಗಳಿಗೂ ಅಪಾಯ ಎದುರಾಗಿದೆ. ಹೀಗಾಗಿ ನಗರಸಭೆ ಕೂಡಲೇ ಅಪಾಯದ ವಲಯದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಗೋಡೆ ತೆರವು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!