ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡ ಕಟ್ಟಡ; ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಆರೋಪ
ಉಡುಪಿ, ಜು. 2: ಉಡುಪಿ ನಗರದ ಬನ್ನಂಜೆಯಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡು ಪಾಳು ಬಿದ್ದಿದ್ದು, ಸರ್ಕಾರದ ಅಮೂಲ್ಯ ಆಸ್ತಿಯ ದುಸ್ಥಿತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ಬಳಕೆಯಿಲ್ಲದೆ ಉಳಿದಿರುವ ಈ ಕಟ್ಟಡ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೊಮ್ಮೆ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕಟ್ಟಡದ ಗೇಟ್‌ಗಳು ಮುರಿದು ಬಿದ್ದಿದ್ದು, ಬಾಗಿಲು-ಕಿಟಕಿಗಳು ಹಾಳಾಗಿವೆ. ಗೋಡೆಗಳು ಬಿರುಕು ಬಿಟ್ಟಿರುವುದರೊಂದಿಗೆ ಒಳಭಾಗವೂ ಸಂಪೂರ್ಣ ನಿರ್ಜನವಾಗಿದೆ. ನಿರ್ವಹಣೆಯ ಕೊರತೆಯಿಂದ ಕಟ್ಟಡದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದಲೂ ಆತಂಕ ಮೂಡಿಸಿದೆ.
ಸರ್ಕಾರದ ಅಮೂಲ್ಯ ಆಸ್ತಿ ಹೀಗೆ ಹಾಳಾಗುತ್ತಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕಟ್ಟಡವನ್ನು ದುರಸ್ತಿ ಮಾಡಿ ಶಾಲಾ ಮಕ್ಕಳ ವಸತಿ ನಿಲಯ, ಸಾರ್ವಜನಿಕ ಉಪಯೋಗದ ಕೇಂದ್ರ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳನ್ನು ಇಲ್ಲಿ ಸ್ಥಳಾಂತರಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ದುರಸ್ತಿ ಸಾಧ್ಯವಾಗದಿದ್ದರೆ ಶಿಥಿಲ ಕಟ್ಟಡವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ಸಾರ್ವಜನಿಕ ಉಪಯೋಗದ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂಬ ಆಗ್ರಹವೂ ಕೇಳಿಬಂದಿದೆ.


