ಮಣಿಪಾಲ: ಮಾಹೆ (MAHE) ವಿಶ್ವವಿದ್ಯಾಲಯದ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ಅವರು ಜುಲೈ 1ರಂದು ಅಧಿಕಾರ ಸ್ವೀಕರಿಸಿದರು.

ಈ ಹುದ್ದೆಯಲ್ಲಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಡಾ. ನಾರಾಯಣ ಸಭಾಹಿತ್ ಅವರು ಇನ್ನು ಮುಂದೆ ಮಾಹೆ ವಿಶ್ವವಿದ್ಯಾಲಯದ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿರುವ ಡಾ. ಕರುಣಾಕರ್ ಕೋಟೆಗಾರ್ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಸಹಯೋಗ ಸೇರಿದಂತೆ 29 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. 2024ರ ಅಕ್ಟೋಬರ್‌ನಿಂದ ಜೈಪುರದ ಮಣಿಪಾಲ ಕ್ಯಾಂಪಸ್‌ನ ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂಐಟಿಯ ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ 75ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಒಂಬತ್ತು ಪಿಎಚ್‌.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಜೊತೆಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ (IEEE) ಸಂಸ್ಥೆಯ ಹಿರಿಯ ಸದಸ್ಯರಾಗಿರುವ ಅವರು, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISTE)ನ ಆಜೀವ ಸದಸ್ಯರೂ ಆಗಿದ್ದಾರೆ. ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಮಹತ್ವದ ಕೊಡುಗೆ ನೀಡಿರುವ ಡಾ. ಕೋಟೆಗಾರ್ ಅವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!