ಮಂಗಳೂರಿನಲ್ಲಿ ‘ಭಾವಸಂಗಮ’ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ: ಜುಲೈ 18, 19 ಹಾಗೂ 26ರಂದು ಆಯೋಜನೆ

ಮಂಗಳೂರು, ಜು.3: ಕಲಾಮೃತ ಮಂಗಳೂರು ಹಾಗೂ ನಮ್ಮ ಕುಡ್ಲ ಸಂಸ್ಥೆಗಳು, ಶಾರದಾ ವಿದ್ಯಾಲಯ ಮಂಗಳೂರು ಸಹಯೋಗದೊಂದಿಗೆ “ಭಾವಸಂಗಮ” ಜಿಲ್ಲಾ ಮಟ್ಟದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳ ವೈಯಕ್ತಿಕ ಗಾಯನ ಸ್ಪರ್ಧೆಯನ್ನು ಜುಲೈ 18, 19 ಹಾಗೂ 26ರಂದು ಮಂಗಳೂರಿನಲ್ಲಿ ಆಯೋಜಿಸಿವೆ ಎಂದು ಕಲಾಮೃತ ಸದಸ್ಯ ಗಣೇಶ್ ಸೋಮಯಾಜಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಪ್ರಥಮ ಹಂತ ಜುಲೈ 18 ಮತ್ತು 19ರಂದು ನವರತ್ನ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ದ್ವಿತೀಯ ಹಂತದ ಸೆಮಿಫೈನಲ್ ಹಾಗೂ ಗ್ರ್ಯಾಂಡ್ ಫಿನಾಲೆ ಜುಲೈ 26ರಂದು ಬೆಳಿಗ್ಗೆ 9 ಗಂಟೆಯಿಂದ ಶಾರದಾ ವಿದ್ಯಾಲಯ, ಕೊಡಿಯಾಲ್‌ಬೈಲ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ 12ರಿಂದ 18 ವರ್ಷದ ವಿದ್ಯಾರ್ಥಿಗಳು ಹಾಗೂ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಮೊದಲ ಹಂತದಲ್ಲಿ ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯ ಭಕ್ತಿಗೀತೆಗಳನ್ನು ಮಾತ್ರ ಹಾಡಬೇಕಿದ್ದು, ಪಲ್ಲವಿ ಮತ್ತು ಒಂದು ಚರಣ ಸೇರಿದಂತೆ ಗರಿಷ್ಠ ಮೂರು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಈ ಹಂತದಲ್ಲಿ ಪಕ್ಕವಾದ್ಯಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.

ಪ್ರಥಮ ಹಂತದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ಸೆಮಿಫೈನಲ್ ಹಾಗೂ ಗ್ರ್ಯಾಂಡ್ ಫಿನಾಲೆಯಲ್ಲಿ ಭಾವಗೀತೆಗಳನ್ನು ಹಾಡಲಿದ್ದು, ಚಲನಚಿತ್ರಗಳ ಭಾವಗೀತೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ರಾಗ, ತಾಳ ಹಾಗೂ ಭಾವ ಸ್ಪಷ್ಟವಾಗಿರುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.

ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ ಹಾಗೂ ಸಾರ್ವಜನಿಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಶಂಸಾ ಪತ್ರ ಹಾಗೂ ಪದಕ ನೀಡಲಾಗುವುದು. ವಿಜೇತರಿಗೆ ಚಿನ್ನ ಮತ್ತು ಬೆಳ್ಳಿಯ ಪದಕಗಳೊಂದಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು ಎಂದು ಗಣೇಶ್ ಸೋಮಯಾಜಿ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಅಮೀನ್ (9880584366) ಹಾಗೂ ಟಿಂಕು ಕುವರ್ (9353221210) ಅವರನ್ನು ಪ್ರತಿದಿನ ಸಂಜೆ 3ರಿಂದ 7 ಗಂಟೆಯೊಳಗೆ ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮುರಳೀಧರ್ ಶೆಟ್ಟಿ, ಪ್ರಶಾಂತ್ ಶೆಟ್, ಲೀಲಾಕ್ಷ ಕರ್ಕೇರ, ಪದ್ಮಜಾ ಎನ್., ನಾಗೇಂದ್ರ ಎನ್., ಸೋಮಶೇಖರ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

 
SHARE
Loading spinner

Leave a Reply

Your email address will not be published. Required fields are marked *

error: Content is protected !!