ತೋಡಿನಲ್ಲಿ ಈಜಲು ಹೋಗಿದ್ದ 10ನೇ ತರಗತಿ ವಿದ್ಯಾರ್ಥಿ ನೀರಲ್ಲಿ ಮುಳುಗಿ ದುರ್ಮರಣ


ಮೂವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಆದಿತ್ಯ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರು

ಕಾಸರಗೋಡು, ಜುಲೈ 6: ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪನಯಾಲ್‌ನ ಕೊಟ್ಟಪ್ಪಾರ ತೋಡಿನಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಪನಯಾಲ್ ನೆಲ್ಲಿಯಡ್ಕ ಉನ್ನತಿಯ ಅನೀಶ್ ಅವರ ಪುತ್ರ ಹಾಗೂ ತಚ್ಚಂಗಾಡು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಆದಿತ್ಯ (15) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಆದಿತ್ಯ ತನ್ನ ಮೂವರು ಸ್ನೇಹಿತರೊಂದಿಗೆ ತೋಡಿನಲ್ಲಿ ಈಜಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರು ತಕ್ಷಣವೇ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಧಾವಿಸಿ ಬಂದು ವಿದ್ಯಾರ್ಥಿಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.

ಬಳಿಕ ಆದಿತ್ಯನನ್ನು ತುರ್ತುವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಕುರಿತು ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!