ವಿಳಿಂಜಂ ಚಿನ್ನ ಅಡವಿಟ್ಟು ವಂಚನೆ; ಆತ್ಮಹತ್ಯೆಗೆ ಯತ್ನಿಸಿದ್ದ ಎರಡನೇ ಸಿಬ್ಬಂದಿಯೂ ಸಾವು

ತಿರುವನಂತಪುರಂ: ವಿಳಿಂಜಂ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎರಡನೇ ಯುವತಿಯೂ ಮೃತಪಟ್ಟಿದ್ದಾರೆ. ಚಾವಡಿನಾಡು ಮೂಲದ ಐಶ್ವರ್ಯ ಇಂದು ಬೆಳಿಗ್ಗೆ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಪ್ರಕರಣದಲ್ಲಿ ವೇಂಗನೂರು ಮೂಲದ ಅಂಜು ಕಳೆದ ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದರು.

ಕಳೆದ ತಿಂಗಳ 30ರಂದು ಅಂಜು ಮತ್ತು ಐಶ್ವರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇಬ್ಬರೂ ವಿಳಿಂಜಂನ ಖಾಸಗಿ ಚಿನ್ನ ಅಡವಿಡುವ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಸುಮಾರು 70 ಪ ವನ್ ಚಿನ್ನಾಭರಣಗಳನ್ನು ಪಣಂಗೋಡು ಮೂಲದ ತಮ್ಮ ಸ್ನೇಹಿತೆ ಸಿಂಧು ಅವರಿಗೆ ಅಡಮಾನ ಇಡಲು ನೀಡಿ ವಂಚನೆ ನಡೆಸಿರುವ ಆರೋಪವಿದೆ.

ಸಿಂಧು ಈ ಚಿನ್ನವನ್ನು ಕಡಿಮೆ ಬಡ್ಡಿದರದಲ್ಲಿ ಇತರ ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇಟ್ಟು ಹಣ ಪಡೆದಿದ್ದು, ಅದರಲ್ಲಿ ಒಂದು ಭಾಗವನ್ನು ಕಮಿಷನ್ ರೂಪದಲ್ಲಿ ಅಂಜು ಮತ್ತು ಐಶ್ವರ್ಯ ಅವರಿಗೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಚಿನ್ನದ ನಿಜವಾದ ಮಾಲೀಕರು ತಮ್ಮ ಆಭರಣಗಳನ್ನು ಮರಳಿ ಪಡೆಯಲು ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಚಿನ್ನವನ್ನು ಹಿಂತಿರುಗಿಸಲು ಸಾಧ್ಯವಾಗದೆ ಇಬ್ಬರೂ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸಿಂಧು ಚಿನ್ನವನ್ನು ಇತರ ಸಂಸ್ಥೆಗಳಲ್ಲಿ ಅಡವಿಟ್ಟ ಬಳಿಕ ಅದನ್ನು ಮರಳಿ ನೀಡದ ಹಿನ್ನೆಲೆಯಲ್ಲಿ ಅಂಜು ಮತ್ತು ಐಶ್ವರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ ಸಿಂಧು ಅವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ವಂಚನೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸಿಂಧು ಅವರ ಹಣಕಾಸು ವ್ಯವಹಾರಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!