ಕೊಲ್ಕತ್ತಾ: ಬರುಯಿಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಪ್ರಭಾಷ್ ಮಂಡಲ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಸಾಕ್ಷ್ಯ ಸಂಗ್ರಹಕ್ಕಾಗಿ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿದ್ದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ನಡೆಯುತ್ತಿದ್ದಾಗ, ಪ್ರಭಾಷ್ ಮಂಡಲ್ ಒಬ್ಬ ಪೊಲೀಸ್ ಅಧಿಕಾರಿಯ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪೊಲೀಸರತ್ತ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಬರುಯಿಪುರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಜುಲೈ 4ರಂದು ಕಾಣೆಯಾಗಿದ್ದ ಬಾಲಕಿಯ ಶವವನ್ನು ಮರುದಿನ ಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಮಂಗಳವಾರ ಮುಂಜಾನೆ ಸುಮಾರು 12.45ರ ವೇಳೆಗೆ ಬಾಲಕಿಯ ಮೃತದೇಹ ಪತ್ತೆಯಾಗಿದ್ದ ಸೂರ್ಯಪುರ ಹಾಟ್ ಪ್ರದೇಶಕ್ಕೆ ಪೊಲೀಸರು ಆರೋಪಿಯನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ದಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಅನುಮಾನದ ಮೇರೆಗೆ ಇಂದ್ರಜಿತ್ ಮಂಡಲ್ ಎಂಬ ಯುವಕನನ್ನು ಸ್ಥಳೀಯರು ಥಳಿಸಿ ಕೊಂದಿದ್ದರು. ಆದರೆ ನಂತರದ ಪೊಲೀಸ್ ತನಿಖೆಯಲ್ಲಿ ಇಂದ್ರಜಿತ್ ಸಂಪೂರ್ಣ ನಿರಪರಾಧಿ ಎಂಬುದು ಸ್ಪಷ್ಟವಾಗಿದೆ.
ಬರುಯಿಪುರದಲ್ಲಿರುವ ಮನೆಯಿಂದ ಸ್ನೇಹಿತನ ಹುಟ್ಟುಹಬ್ಬದ ಉಡುಗೊರೆ ಖರೀದಿಸಲು ತೆರಳಿದ್ದ ಬಾಲಕಿ ಶನಿವಾರದಿಂದ ನಾಪತ್ತೆಯಾಗಿದ್ದಳು. ಭಾನುವಾರ ಆಕೆಯ ಮೃತದೇಹ ಪತ್ತೆಯಾಯಿತು.
ಬಾಲಕಿಯ ಖಾಸಗಿ ಅಂಗಗಳಲ್ಲಿ ಗಾಯಗಳು, ಗೀರುಗಳು ಮತ್ತು ಕಚ್ಚಿದ ಗುರುತುಗಳು ಕಂಡುಬಂದಿದ್ದು, ತಲೆಯ ಮೇಲೂ ಗಂಭೀರ ಗಾಯಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಚೂಪಾದ ವಸ್ತುವಿನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಬಾಲಕಿಯನ್ನು ಚೀಲದಲ್ಲಿ ಹಾಕಿ ಕೆರೆಯೊಂದಕ್ಕೆ ಎಸೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದರು.


