ಆರ್ಯಾಡನ್ ಮೊಹಮ್ಮದ್ ಸ್ಮಾರಕ ಪ್ರಶಸ್ತಿ ರೇವಂತ್ ರೆಡ್ಡಿಗೆ

ನಿಲಂಬೂರು, ಸೆ.26: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇರಳದ ಮಾಜಿ ಸಚಿವ ಆರ್ಯಾಡನ್ ಮೊಹಮ್ಮದ್ ಅವರ ಸ್ಮರಣಾರ್ಥ ನೀಡಲಾಗುವ ‘ಆರ್ಯಾಡನ್ ಮೊಹಮ್ಮದ್–2026 ಅತ್ಯುತ್ತಮ ಸಾರ್ವಜನಿಕ ಸೇವಕ ಪ್ರಶಸ್ತಿ’ಯನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ನಿಲಂಬೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಆರ್ಯಾಡನ್ ಮೊಹಮ್ಮದ್ ಅವರು ಎಂಟು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಕೇರಳದ ನಾಲ್ಕು ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಅವರು ಕಾರ್ಮಿಕರ ಹಕ್ಕುಗಳ ಪರವಾಗಿಯೂ ಧ್ವನಿ ಎತ್ತಿದ್ದರು.

ಆರ್ಯಾಡನ್ ಮೊಹಮ್ಮದ್ ಫೌಂಡೇಶನ್ ವತಿಯಿಂದ ನೀಡಲಾಗುವ ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ರೈತರು, ಹಿಂದುಳಿದ ವರ್ಗಗಳು ಹಾಗೂ ಸಾರ್ವಜನಿಕರ ಕಲ್ಯಾಣಕ್ಕಾಗಿ ರೇವಂತ್ ರೆಡ್ಡಿ ಅವರ ನಾಯಕತ್ವದಲ್ಲಿ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ ಕಾರ್ಯಾಧ್ಯಕ್ಷ ಹಾಗೂ ನಿಲಂಬೂರು ಶಾಸಕ ಆರ್ಯಾಡನ್ ಶೌಕತ್ ತಿಳಿಸಿದ್ದಾರೆ.

ಆರ್ಯಾಡನ್ ಮೊಹಮ್ಮದ್ ಅವರ ನಾಲ್ಕನೇ ಪುಣ್ಯಸ್ಮರಣೆಯ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಪಿ.ವಿ. ಅಬ್ದುಲ್ ವಹಾಬ್, ನಿಲಂಬೂರು ಶಾಸಕ ಆರ್ಯಾಡನ್ ಶೌಕತ್ ಹಾಗೂ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹೀದ್ ತೆಕ್ಕಿಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!