ಆಟೋ ದರ ಏರಿಕೆಗೆ ಒತ್ತಾಯ; ಕನಿಷ್ಠ ಬಾಡಿಗೆ ₹50ಕ್ಕೆ ಹೆಚ್ಚಳಕ್ಕೆ ಬೇಡಿಕೆ

ಮಂಗಳೂರು, ಜು.11: ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ದರ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಆಟೋರಿಕ್ಷಾ ಚಾಲಕರಿಗೆ ನೆರವಾಗಲು ಕನಿಷ್ಠ ಪ್ರಯಾಣ ದರವನ್ನು ₹35ರಿಂದ ₹50ಕ್ಕೆ, ನಂತರದ ಪ್ರತಿ ಕಿ.ಮೀ. ದರವನ್ನು ₹20ರಿಂದ ₹30ಕ್ಕೆ ಹೆಚ್ಚಳಗೊಳಿಸುವಂತೆ ವಿವಿಧ ಆಟೋರಿಕ್ಷಾ ಸಂಘಟನೆಗಳು ಒತ್ತಾಯಿಸಿವೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಸಭೆಯಲ್ಲಿ, ನಗರ ಮತ್ತು ಗ್ರಾಮಾಂತರ ಆಟೋರಿಕ್ಷಾಗಳಿಗೆ ಪ್ರತ್ಯೇಕ ಕನಿಷ್ಠ ದರ ನಿಗದಿ ಮಾಡಬೇಕು, ಉಚಿತ ಕಾಯುವಿಕೆ ಅವಧಿಯನ್ನು 18 ನಿಮಿಷದಿಂದ 10 ನಿಮಿಷಕ್ಕೆ ಇಳಿಸಬೇಕು, ಕೋವಿಡ್ ಅವಧಿಯಂತೆ ಆರ್ಥಿಕ ನೆರವು ನೀಡಬೇಕು, ಸಿಎನ್‌ಜಿ ಬಂಕ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಎಲ್‌ಪಿಜಿ ಮೈಲೇಜ್ ವ್ಯತ್ಯಾಸವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಲಾಯಿತು.

ಆಟೋರಿಕ್ಷಾಗಳ ನಾಲ್ಕು ಬದಿಗಳಲ್ಲೂ ವಲಯ ಸಂಖ್ಯೆ ಸ್ಟಿಕರ್ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಯೂ ಕೇಳಿಬಂತು. 2022ರಿಂದ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ. ಈ ಅವಧಿಯಲ್ಲಿ ಎಲ್‌ಪಿಜಿ ದರ ಕೆ.ಜಿಗೆ ₹62.36ರಿಂದ ₹86.76ಕ್ಕೆ, ಸಿಎನ್‌ಜಿ ₹86ರಿಂದ ₹95ಕ್ಕೆ, ಪೆಟ್ರೋಲ್ ₹101ರಿಂದ ₹110-112ಕ್ಕೆ ಹಾಗೂ ಡೀಸೆಲ್ ₹87.41ರಿಂದ ₹98.99ಕ್ಕೆ ಏರಿಕೆಯಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಆಟೋ ದರ ಪರಿಷ್ಕರಣೆಗೆ 2025ರ ಅಕ್ಟೋಬರ್‌ನಲ್ಲೇ ಮನವಿ ಸಲ್ಲಿಸಲಾಗಿದ್ದು, ಚಾಲಕರ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಆಟೋರಿಕ್ಷಾ ಸಂಘಟನೆಗಳ ಮುಖಂಡರು, ಡಿಸಿಪಿ ರವಿಶಂಕರ್ ಹಾಗೂ ಆರ್‌ಟಿಒ ಮುರುಗೇಂದ್ರ ಶಿರೋಳ್ಕರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!