ಮಂಗಳೂರು:ವಿಶ್ವದ ಅತ್ಯಂತ ಸವಾಲಿನ ಸಮುದ್ರ ಮಾರ್ಗಗಳಲ್ಲಿ ಒಂದಾದ ಇಂಗ್ಲಿಷ್ ಚಾನೆಲ್ ಅನ್ನು ಆರು ಸದಸ್ಯರ ರಿಲೇ ತಂಡದೊಂದಿಗೆ ಜುಲೈ 3ರಂದು ಯಶಸ್ವಿಯಾಗಿ ಈಜಿದ ಮಂಗಳೂರಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಖ್ಯಾತ ಈಜುಪಟು ಡಾ. ಗುರುಪ್ರಸಾದ್ ಭಟ್, ತಮ್ಮ ಸಾಧನೆಯ ಅನುಭವವನ್ನು ಸೋಮವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

ಇಂಗ್ಲಿಷ್ ಚಾನೆಲ್ ಈಜು ವಿಶ್ವದ ಅತ್ಯಂತ ಕಠಿಣ ಸಾಹಸಗಳಲ್ಲಿ ಒಂದಾಗಿದೆ. 13ರಿಂದ 14 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ, ಅಟ್ಲಾಂಟಿಕ್ ಮಹಾಸಾಗರ ಮತ್ತು ಉತ್ತರ ಸಮುದ್ರದ ಸಂಗಮದಿಂದ ಉಂಟಾಗುವ ಪ್ರಬಲ ಅಲೆಗಳು ಹಾಗೂ ವಿಶ್ವದ ಅತ್ಯಂತ ಬ್ಯುಸಿಯಾದ ಹಡಗು ಸಂಚಾರ ಮಾರ್ಗವಾಗಿರುವ ಕಾರಣ ಈ ಸವಾಲು ಇನ್ನಷ್ಟು ದುಸ್ತರವಾಗುತ್ತದೆ. ಅಲೆಗಳ ಒತ್ತಡದಿಂದ ನೇರವಾಗಿ ಈಜಲು ಸಾಧ್ಯವಾಗದೆ ಸುಮಾರು 50ರಿಂದ 56 ಕಿಲೋಮೀಟರ್‌ವರೆಗೆ ಕ್ರಮಿಸಿ ಈ ಸಾಧನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಈ ಸಾಧನೆಯೊಂದಿಗೆ ಜಗತ್ತಿನ ಏಳು ಭೂಖಂಡಗಳ ಅತಿ ಎತ್ತರದ ಶಿಖರಗಳು ಹಾಗೂ ಏಳು ಮಹಾಸಾಗರಗಳನ್ನು ಕ್ರಮಿಸುವ ಪ್ರತಿಷ್ಠಿತ ‘ಸೆವೆನ್ ಡಬಲ್ ಸಮಿಟ್ಸ್’ ಗುರಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದರು. ಈ ಯೋಜನೆಯಡಿ ಈಗಾಗಲೇ ಐದು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆಫ್ರಿಕಾದ ಕಿಲಿಮಂಜಾರೋ, ಯುರೋಪ್‌ನ ಮೌಂಟ್ ಎಲ್ಬ್ರಸ್, ಆಸ್ಟ್ರೇಲಿಯಾದ ಮೌಂಟ್ ಕೊಸಿಯಸ್‌ಕೊ ಶಿಖರಗಳನ್ನು ಏರಿದ್ದಾರೆ. ಅಲ್ಲದೆ, ಪೆಸಿಫಿಕ್ ಮಹಾಸಾಗರದ ಕ್ಯಾಟಲಿನಾ ಚಾನೆಲ್ ಹಾಗೂ ಇಂಗ್ಲಿಷ್ ಚಾನೆಲ್ ಈಜಿನಲ್ಲೂ ಯಶಸ್ಸು ಸಾಧಿಸಿದ್ದಾರೆ.

40ನೇ ವಯಸ್ಸಿನಲ್ಲಿ ಅಭಿಸರಣ್ ಆಕ್ವೇಟಿಕ್ ಸೆಂಟರ್‌ನ ಮುಖ್ಯ ತರಬೇತುದಾರ ಸಂಕೇತ್ ಬೆಂಗ್ರೆ ಅವರ ಮಾರ್ಗದರ್ಶನದಲ್ಲಿ ಈಜು ಕಲಿಯಲು ಆರಂಭಿಸಿದ್ದ ಅವರು, ಮಗನೊಂದಿಗೆ ಮಂಗಳೂರಿನ ಅಲೋಶಿಯಸ್‌ನಲ್ಲಿ ತರಬೇತಿ ಪಡೆದು ಬಳಿಕ ಉದ್ಯಾವರ ನದಿ ಸೇರಿದಂತೆ ಮುಕ್ತ ಜಲ ಈಜಿನಲ್ಲಿ ಪರಿಣತಿ ಗಳಿಸಿದರು. ಈಜು ಕೇವಲ ಕ್ರೀಡೆಯಲ್ಲ, ಜೀವ ರಕ್ಷಿಸುವ ಕೌಶಲವೂ ಆಗಿದ್ದು, ಶಾಲಾ ಹಂತದಲ್ಲೇ ಈಜು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಮುಳುಗುವ ಅಪಾಯದ ಭಯದಿಂದ ಮಕ್ಕಳನ್ನು ಈಜಿನಿಂದ ದೂರವಿಡುವ ಬದಲು ಸುರಕ್ಷಿತವಾಗಿ ಈಜು ಕಲಿಸುವ ಸಂಸ್ಕೃತಿ ಸಮಾಜದಲ್ಲಿ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಅಭಿಸರಣ್ ಆಕ್ವೇಟಿಕ್ ಸೆಂಟರ್‌ನ ಮುಖ್ಯ ತರಬೇತುದಾರ ಸಂಕೇತ್ ಬೆಂಗ್ರೆ ಉಪಸ್ಥಿತರಿದ್ದರು.


