ಕಾಸರಗೋಡು: ಹಿರಿಯ ನ್ಯಾಯವಾದಿ, ಕನ್ನಡ ಹೋರಾಟಗಾರ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದ ಮುಂಚೂಣಿ ವ್ಯಕ್ತಿತ್ವ ಅಡೂರು ಉಮೇಶ್ ನ್ಯಾಕ್ ಅವರಿಗೆ ಅವರ ಅಭಿಮಾನಿಗಳು ನಿವಾಸಕ್ಕೆ ಭೇಟಿ ನೀಡಿ ಶಾಲು ಹೊದಿಸಿ, ಫಲಪುಷ್ಪ ನೀಡಿ, ಪೇಟ ತೊಡಿಸಿ ಗೌರವ ಸಮರ್ಪಿಸಿದರು.

ಹಿರಿಯ ನ್ಯಾಯವಾದಿ ಹಾಗೂ ಹರಿದಾಸ ಮಹಾಬಲ ಶೆಟ್ಟಿ ಮತ್ತು ನಿವೃತ್ತ ಕಸ್ಟಮ್ಸ್ ಅಧಿಕಾರಿ ಶುಭೋದಯ ಕೂಡ್ಲು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಸಂಘಟಕ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಯಾಗಿ ಮಾತನಾಡಿದರು. 98ನೇ ವಯಸ್ಸಿನಲ್ಲೂ ಉಮೇಶ್ ನ್ಯಾಕ್ ಅವರ ನೆನಪಿನ ಶಕ್ತಿ, ಸಮಾಜ ಸೇವೆಯ ಬದ್ಧತೆ ಮತ್ತು ಕನ್ನಡ ಪರ ಹೋರಾಟದ ಉತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಅವರು ಶ್ಲಾಘಿಸಿದರು. ತಮ್ಮ ದೀರ್ಘಕಾಲದ ಒಡನಾಟವನ್ನು ನೆನಪಿಸಿಕೊಂಡ ಅವರು, ಉಮೇಶ್ ನ್ಯಾಕ್ ಅವರ ಜೀವಮಾನದ ಸಾಧನೆಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಹಾಬಲ ಶೆಟ್ಟಿ, ಶುಭೋದಯ ಕೂಡ್ಲು, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ಕೊಲ್ಯ ರಮಾನಂದ ಸ್ವಾಮಿಜಿ ಸಮಿತಿ ಟ್ರಸ್ಟಿ ರಾಧಾಕೃಷ್ಣ ಶೆಟ್ಟಿ, ಮೆರ್ವಿನ್ ಡಿಸೋಜಾ ಹಾಗೂ ಕಾಸರಗೋಡು ಚಿನ್ನಾ ಸೇರಿದಂತೆ ಹಲವು ಗಣ್ಯರು ಅಡೂರು ಉಮೇಶ್ ನ್ಯಾಕ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಉಮೇಶ್ ನ್ಯಾಕ್ ಅವರ ಕುಟುಂಬ ಸದಸ್ಯರಾದ ಪುತ್ರ ಹಾಗೂ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಅಶೋಕ್ ನ್ಯಾಕ್, ಪುತ್ರಿ ಜ್ಯೋತಿ ವಿ. ನ್ಯಾಕ್, ಅಳಿಯ ವಿಜಯಕುಮಾರ್ ನ್ಯಾಕ್, ಸೊಸೆ ಹಾಗೂ ನಿವೃತ್ತ ಕೇರಳ ಬ್ಯಾಂಕ್ ಉನ್ನತ ಅಧಿಕಾರಿಣಿ ಶಕೀಲ ಎ. ನ್ಯಾಕ್ ಹಾಗೂ ಮೊಮ್ಮಗಳು ಡಾ. ರಕ್ಷಾ ನ್ಯಾಕ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹಾಗೂ ರಂಗನಟ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ನ್ಯಾಕ್ ಅವರು ತಮ್ಮ ತಂದೆಯನ್ನು ಗೌರವಿಸಿದ ಅಭಿಮಾನಿ ಬಳಗದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

