ಮಂಡ್ಯ, ಜುಲೈ 14: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ದಿವಂಗತ ಎಸ್. ಜಾನಕಿ ಅವರ ಅಸ್ಥಿಗಳನ್ನು ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಘೋಸಾಯಿ ಘಾಟ್ ಸಮೀಪದ ಪವಿತ್ರ ಕಾವೇರಿ ನದಿಯಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.

ವೈದಿಕ ಅರ್ಚಕ ರಮೇಶ್ ಶರ್ಮಾ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಎಸ್. ಜಾನಕಿ ಅವರ ಮೊಮ್ಮಗಳು ಅಪ್ಸರಾ ಅವರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಪರ ಕ್ರಿಯೆಗಳನ್ನು ನೆರವೇರಿಸಿ ಅಸ್ಥಿ ವಿಸರ್ಜನೆ ಮಾಡಿದರು.

ಈ ವೇಳೆ ಕುಟುಂಬ ಸದಸ್ಯರು, ಆಪ್ತರು ಹಾಗೂ ಅಭಿಮಾನಿಗಳು ಗಾನಕೋಗಿಲೆಗೆ ಅಂತಿಮ ನಮನ ಸಲ್ಲಿಸಿದರು. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಎಸ್. ಜಾನಕಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಕಾವೇರಿ ತಟದಲ್ಲಿ ನಡೆದ ಅಸ್ಥಿ ವಿಸರ್ಜನೆಯೊಂದಿಗೆ ಅಂತಿಮ ವಿಧಿವಿಧಾನಗಳು ಪೂರ್ಣಗೊಂಡವು.

