ಬಂಟ್ವಾಳ: ಒಮಾನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕರೊಬ್ಬರು ಅಪಾಯದಿಂದ ಪಾರಾಗಿದ್ದು, ಸುರಕ್ಷಿತರಾಗಿದ್ದಾರೆ. ಈ ಮಾಹಿತಿ ಕುಟುಂಬಕ್ಕೆ ತಲುಪುತ್ತಿದ್ದಂತೆ ಆತಂಕದ ವಾತಾವರಣ ನಿವಾರಣೆಯಾಗಿ ನೆಮ್ಮದಿ ಮೂಡಿದೆ.

ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ನಿವಾಸಿ ರಚನ್ ಕಳೆದ ಹಲವು ವರ್ಷಗಳಿಂದ ವಾಣಿಜ್ಯ ಹಡಗಿನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಅವರು ಕರ್ತವ್ಯದಲ್ಲಿದ್ದ ಹಡಗು ಒಮಾನ್ ಕರಾವಳಿ ಸಮೀಪ ಸಾಗುತ್ತಿದ್ದ ವೇಳೆ ದಾಳಿ ಸಂಭವಿಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಚನ್ ನೀಡಿದ ಮಾಹಿತಿಯಂತೆ, ಹಡಗು ಗಮ್ಯಸ್ಥಾನದತ್ತ ಸಾಗುತ್ತಿದ್ದ ವೇಳೆ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ಅದರ ಪರಿಣಾಮವಾಗಿ ಎಂಜಿನ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿಯನ್ನು ತುರ್ತುವಾಗಿ ಜೀವ ರಕ್ಷಕ ದೋಣಿಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಬಳಿಕ ಮಾಹಿತಿ ಪಡೆದ ಒಮಾನ್ ನೌಕಾಪಡೆ ಸ್ಥಳಕ್ಕೆ ಆಗಮಿಸಿ ಎಲ್ಲ ಸಿಬ್ಬಂದಿಯನ್ನು ರಕ್ಷಿಸಿ ಸುರಕ್ಷಿತ ನೆಲೆಗೆ ಕರೆದೊಯ್ದಿದೆ. ಸದ್ಯ ಎಲ್ಲ ಸಿಬ್ಬಂದಿ ಕಂಪನಿಯ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಯುವಕನ ಸಂಬಂಧಿ ಉದಯ್ ಪೂಜಾರಿ ಮಾತನಾಡಿ, “ಘಟನೆಯ ಬಳಿಕ ಕುಟುಂಬದವರು ತೀವ್ರ ಆತಂಕದಲ್ಲಿದ್ದರು. ಆದರೆ ರಚನ್ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ದೊರೆತಿರುವುದು ಸಮಾಧಾನ ತಂದಿದೆ. ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿ ಎಂಬುದೇ ನಮ್ಮ ಪ್ರಾರ್ಥನೆ,” ಎಂದು ಹೇಳಿದರು.
ಈ ಘಟನೆ ವಿದೇಶಿ ಸಮುದ್ರ ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ನಾವಿಕರು ಎದುರಿಸುತ್ತಿರುವ ಅಪಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದ್ದು, ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಭದ್ರತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.


