ಸುಜೀರು: ಎಚ್‌ಪಿವಿ ಲಸಿಕಾ ಶಿಬಿರ – ಗರ್ಭಕಂಠದ ಕ್ಯಾನ್ಸರ್ ತಡೆಗೆ ಪೋಷಕರಲ್ಲಿ ಜಾಗೃತಿ

ಸುಜೀರು: ಸರಕಾರಿ ಪ್ರೌಢಶಾಲೆ ಸುಜೀರು, ಮೌಲಾನ ಆಜಾದ್ ಪದವಿ ಪೂರ್ವ ಕಾಲೇಜು ಪುದು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ (ಜುಲೈ 14) ಎಚ್‌ಪಿವಿ (HPV) ಲಸಿಕಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಲೋಕನಾಯಕ ಸ್ವಾಗತಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಟುಡೇ ಫೌಂಡೇಶನ್ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪನಿರ್ದೇಶಕ ಶಶಿಧರ್, ಎಚ್‌ಪಿವಿ ಲಸಿಕೆಯ ಮಹತ್ವವನ್ನು ವಿವರಿಸಿ, ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಪರಿಣಾಮಕಾರಿ ಎಂಬ ಅರಿವನ್ನು ಪೋಷಕರಲ್ಲಿ ಮೂಡಿಸಿದರು.


ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿ, 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳು ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಬಹುದೆಂದು ತಿಳಿಸಿದರು. ಲಸಿಕೆಯ ಪರಿಣಾಮಕಾರಿತ್ವ ಹಾಗೂ ಸುರಕ್ಷತೆ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಲಸಿಕೆ ಕುರಿತು ಪೋಷಕರಲ್ಲಿರುವ ಅನುಮಾನಗಳಿಗೆ ಸ್ಪಷ್ಟನೆ ನೀಡಿದರು. ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಆದಿತ್ಯ ರೈ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು.


ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ, ಲಸಿಕೆಯ ಪ್ರಯೋಜನಗಳು ಹಾಗೂ ಲಸಿಕೆ ಪಡೆಯದಿದ್ದಲ್ಲಿ ಉಂಟಾಗಬಹುದಾದ ಆರೋಗ್ಯದ ಅಪಾಯಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಿದರು. ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಉಮರ್ ಫಾರೂಕ್, ಕುಟುಂಬ ವೈದ್ಯರ ಸಲಹೆ ಪಡೆದು ಮಕ್ಕಳಿಗೆ ಲಸಿಕೆ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ವಿಷಯ ಪರಿವೀಕ್ಷಕ ದೇವದಾಸ್, ಸಮುದಾಯ ಆರೋಗ್ಯಾಧಿಕಾರಿ ಲೀನೆಟ್, ಬಂಟ್ವಾಳ ಬಿಆರ್‌ಸಿ ವಿದ್ಯಾ, ಮೌಲಾನ ಆಜಾದ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶೋಭಾ, ಸುಜೀರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಕುಸುಮ, ಎಸ್‌ಡಿಎಂಸಿ ಸದಸ್ಯೆ ನಾಝ್ಲಿನ್ ಹಾಗೂ ಇತರ ಸದಸ್ಯರು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!