ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಜಾಗತಿಕ ಸಮುದಾಯಕ್ಕೆ ಮನವಿ

ಮಂಗಳೂರು: ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಟಿಬೆಟಿಯನ್ ಸಂಸ್ಕೃತಿಯ ಉಳಿವಿಗಾಗಿ ವಿಶ್ವಸಂಸ್ಥೆ, ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಟಿಬೆಟಿಯನ್ ಸಮುದಾಯದ ಪ್ರತಿನಿಧಿ ಡೆನ್ಜಿನ್ ದಾತೋನ್ (Denzin Dataon) ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೆಟಿಯನ್ ಜನರು ಹಲವು ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸುತ್ತಿದ್ದು, ಅವರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ಸ್ವಯಂ-ಆಹುತಿ ನೀಡಿದ ಟಿಬೆಟಿಯನ್ ಹುತಾತ್ಮರ ತ್ಯಾಗವನ್ನು ಗೌರವಿಸಬೇಕು ಹಾಗೂ ಚೀನಾದ ಹೊಸ ‘ಜನಾಂಗೀಯ ಏಕತೆ’ ಕಾನೂನಿನ ಪರಿಣಾಮಗಳ ಕುರಿತು ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಟಿಬೆಟ್-ಚೀನಾ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ವಿವಿಧ ದೇಶಗಳು ಕಾನೂನು ಹಾಗೂ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು. ಅಮೆರಿಕ ಜಾರಿಗೊಳಿಸಿರುವ ‘ರಿಸಾಲ್ವ್ ಟಿಬೆಟ್ ಆಕ್ಟ್’ ಮಾದರಿಯ ಕ್ರಮಗಳನ್ನು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಭಾರತ ಸರ್ಕಾರವು ಟಿಬೆಟಿಯನ್ ಹೋರಾಟಕ್ಕೆ ಇನ್ನಷ್ಟು ಸಕ್ರಿಯ ಬೆಂಬಲ ನೀಡಬೇಕು. ಟಿಬೆಟ್ ಸಮಸ್ಯೆ ಕೇವಲ ಮಾನವೀಯ ವಿಷಯವಲ್ಲ; ಅದು ಭಾರತದ ರಾಷ್ಟ್ರೀಯ ಭದ್ರತೆ, ಪರಿಸರ ಸಂರಕ್ಷಣೆ, ಪ್ರಾದೇಶಿಕ ಶಾಂತಿ ಹಾಗೂ ಭಾರತ-ಟಿಬೆಟ್ ನಡುವಿನ ಐತಿಹಾಸಿಕ ಸಂಬಂಧಕ್ಕೂ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿಬೆಟಿಯನ್ ಸಮುದಾಯ ಕೇಂದ್ರ, ಮೈಸೂರಿನ ನಿರ್ದೇಶಕ ಸೋನಮ್ ಉಪಸ್ಥಿತರಿದ್ದು, ಟಿಬೆಟಿಯನ್ ಜನರ ಹಕ್ಕುಗಳ ರಕ್ಷಣೆಗಾಗಿ ಜಾಗತಿಕ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!