ಕೋಲಾರದ ಗಡಿನಾಡು ಕನ್ನಡಿಗ ಬಿ. ಶಿವಕುಮಾರ್ ಅವರಿಂದ ಜು.26ರಂದು ಕನ್ನಡ ಮೆರವಣಿಗೆಗೆ ಚಾಲನೆ….!

ಕಾಸರಗೋಡು: ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಜುಲೈ 26ರಂದು ನಡೆಯಲಿರುವ ಭವ್ಯ ಕನ್ನಡ ಮೆರವಣಿಗೆಯನ್ನು ಕೋಲಾರದ ಖ್ಯಾತ ಕನ್ನಡಪರ ಹೋರಾಟಗಾರ, ಶರಣ ಸಾಹಿತ್ಯ ಪರಿಷತ್ ಕೋಲಾರ ತಾಲ್ಲೂಕು ಅಧ್ಯಕ್ಷ ಹಾಗೂ ಸ್ವರ್ಣಭೂಮಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಬಿ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.

ಕನ್ನಡ ಭವನ ಗ್ರಂಥಾಲಯದ ರಜತ ಸಂಭ್ರಮ ಸಮಾರೋಪ ಪ್ರಯುಕ್ತ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಆಯೋಜಿಸಲಾಗಿರುವ ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಐಎಎಸ್ ಅವರಿಗೆ ಗೌರವ ಸಲ್ಲಿಸುವ ಕನ್ನಡ ಮೆರವಣಿಗೆಗೆ ಬಿ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.

ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಬಿ. ಶಿವಕುಮಾರ್ ಅವರ ನೇತೃತ್ವದಲ್ಲಿ 2025ರಲ್ಲಿ ಕೋಲಾರ ಪತ್ರಿಕಾ ಭವನದಲ್ಲಿ ಗಡಿನಾಡು ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕನ್ನಡಪರ ಸಂಘಟನೆಗಳ ಮೇಧಾವಿಗಳು ಪ್ರತಿವರ್ಷ ಕಾಸರಗೋಡು ಕನ್ನಡ ಭವನದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಈ ನಡುವೆ, ನವೆಂಬರ್ ತಿಂಗಳಲ್ಲಿ ಕನ್ನಡ ಭವನದಲ್ಲಿ ಅದ್ದೂರಿಯಾಗಿ ಗಡಿನಾಡು ಕನ್ನಡ ರಾಜ್ಯೋತ್ಸವ ಆಯೋಜಿಸುವ ಕುರಿತು ಪ್ರಾಥಮಿಕ ಹಂತದ ಮಾತುಕತೆಗಳು ನಡೆಯುತ್ತಿವೆ ಎಂದು ಬಿ. ಶಿವಕುಮಾರ್ ತಿಳಿಸಿದ್ದಾರೆ.

ಸಮ್ಮೇಳನದ ಅಂಗವಾಗಿ ನಡೆಯಲಿರುವ ಕನ್ನಡ ಮೆರವಣಿಗೆಯಲ್ಲಿ ಬೆಂಗಳೂರು ಮೂಲದ ಶ್ರೀ ನಾಗರಾಜ್ ಅವರ ನೇತೃತ್ವದಲ್ಲಿ 10 ಕಲಾತಂಡಗಳು ಹಾಗೂ ಕಾಸರಗೋಡಿನ ಶ್ರೀ ಗುರುರಾಜ್ ಅವರ ನೇತೃತ್ವದಲ್ಲಿ 5 ಕಲಾತಂಡಗಳು ಭಾಗವಹಿಸಲಿವೆ. ಅಲ್ಲದೆ ನಾಸಿಕ್ ಬ್ಯಾಂಡ್, ಕೇರಳ ಚೆಂಡೆ, ಕರ್ನಾಟಕ ಡೊಳ್ಳು ಕುಣಿತ, ಪಟಕುಣಿತ, ಜಾನಪದ ಕಲಾತಂಡಗಳು ಹಾಗೂ ಕನ್ನಡ ಧ್ವಜಗಳೊಂದಿಗೆ ಮೆರವಣಿಗೆ ವಿಶೇಷ ಮೆರುಗು ಪಡೆಯಲಿದೆ.

ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಮಾಹಿತಿ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!