ಮಂಗಳೂರು: ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪುನೀತ್ ಕೆರೆಹಳ್ಳಿ

ಮಂಗಳೂರು: ಬೆಂಗಳೂರಿನ ಲಾರಿಪಾಳ್ಯದಲ್ಲಿ ಗೋ ರಕ್ಷಣೆ ವೇಳೆ ನೀಡಿದ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ ಅವರು ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ 19 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾಗಿರುವ ವಿಚಾರವನ್ನು ಉಲ್ಲೇಖಿಸಿ, ಅಕ್ರಮ ವಲಸಿಗರ ವಿರುದ್ಧ ಕಾನೂನುಬದ್ಧವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ, ಬೆಂಗಳೂರಿನಲ್ಲಿ ನಡೆಸಿದ ರೀತಿಯ ಕಾರ್ಯಾಚರಣೆಯನ್ನು ಮಂಗಳೂರಿನಲ್ಲಿಯೂ ನಡೆಸುವುದಾಗಿ ಅವರು ಹೇಳಿದರು.

“ಅಕ್ರಮ ಬಾಂಗ್ಲಾದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತ ತಾಣವಾಗಿದೆ?” ಎಂದು ಪ್ರಶ್ನಿಸಿದ ಅವರು, ಮಂಗಳೂರಿನಲ್ಲಿ ಕೇವಲ ನಾಮಮಾತ್ರದ ಕಾರ್ಯಾಚರಣೆ ನಡೆಸುವುದರಿಂದ ಪ್ರಯೋಜನವಿಲ್ಲ. ಯಾವ ಯಾವ ಮಾಲ್‌ಗಳಲ್ಲಿ ಎಷ್ಟು ಮಂದಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಾವು ನೀಡುವುದಾಗಿ ಹೇಳಿದರು.

“ನಮಗೆ ಮುಕ್ತ ಅವಕಾಶ ನೀಡಿ, ನಾವು ಅವರನ್ನು ಗುರುತಿಸಿ ಪೊಲೀಸರಿಗೆ ಒಪ್ಪಿಸುತ್ತೇವೆ” ಎಂದ ಅವರು, ಅಕ್ರಮ ವಲಸಿಗರಿಗೆ ಸಹಕಾರ ನೀಡುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ಅದನ್ನೂ ಪೊಲೀಸರಿಗೆ ನೀಡುವುದಾಗಿ ತಿಳಿಸಿದರು.

ಇದೇ ವೇಳೆ, “ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ರೈಲಿನಲ್ಲಿ ಬರುವವರ ಪರಿಶೀಲನೆ ನಡೆಯುತ್ತಿದೆಯೇ? ಇದು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯ” ಎಂದು ಅವರು ಪ್ರಶ್ನಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!