ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದ್ದು, ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ವಜಾಗೊಳಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ನೂತನವಾಗಿ ಆಯ್ಕೆಯಾದ ಶಾಸಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ “ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ, ಬದಲಾಗಿ ದೌರ್ಜನ್ಯ ನಡೆದಿದೆ” ಎಂದು ಆರೋಪಿಸಿದರು.
“ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ನೈತಿಕ ಜಯ ಸಾಧಿಸಿದೆ. ನಾವು ಸೋತಿರಬಹುದು, ಆದರೆ ಹೋರಾಟ ನಿಲ್ಲಿಸುವುದಿಲ್ಲ,” ಎಂದು ಅವರು ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿ ನೇರ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿದ ಮಮತಾ, “ಬಂಗಾಳ ಚುನಾವಣೆಯ ನಂತರ ಇಂಡಿಯಾ ಮೈತ್ರಿಕೂಟದಲ್ಲಿ ಮತ್ತಷ್ಟು ಏಕತೆ ಮೂಡಿದೆ” ಎಂದರು.
“ನಾನು ರಾಜೀನಾಮೆ ನೀಡುವುದಿಲ್ಲ. ಬೇಕಾದರೆ ಅವರು ನನ್ನನ್ನು ವಜಾ ಮಾಡಲಿ. ಈ ದಿನವನ್ನು ಕಪ್ಪು ದಿನವಾಗಿ ಆಚರಿಸಬೇಕು. ವಿಧಾನಸಭೆಯ ಮೊದಲ ದಿನ ಎಲ್ಲರೂ ಕಪ್ಪು ಬಟ್ಟೆ ಧರಿಸಿ ಬನ್ನಿ,” ಎಂದು ಪಕ್ಷದ ಶಾಸಕರಿಗೆ ಕರೆ ನೀಡಿದರು.
ಇದೇ ವೇಳೆ, ಪಕ್ಷದ ವಿರುದ್ಧ ದ್ರೋಹ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, “ದ್ರೋಹ ಮಾಡಿದವರನ್ನು ಪಕ್ಷದಿಂದ ಹೊರಹಾಕಲಾಗುವುದು” ಎಂದು ಸ್ಪಷ್ಟಪಡಿಸಿದರು.
ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಲವಂತವಾಗಿ ಸೋಲಿಸಲಾಗಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, “ಪಶ್ಚಿಮ ಬಂಗಾಳ ಪೊಲೀಸ್, ಸಿಆರ್‌ಪಿಎಫ್, ಬಿಜೆಪಿ ಪರ ಮನೋಭಾವ ಹೊಂದಿದ್ದ ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.
“ರಾಜ್ಯದಲ್ಲಿ 1500ಕ್ಕೂ ಹೆಚ್ಚು ತೃಣಮೂಲ ಕಾಂಗ್ರೆಸ್ ಕಚೇರಿಗಳನ್ನು ಕಬಳಿಸಲಾಗಿದೆ. ಇದು ಚುನಾವಣೆ ಅಲ್ಲ, ದೌರ್ಜನ್ಯ,” ಎಂದು ಅವರು ಕಿಡಿಕಾರಿದರು.
ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆಯನ್ನು ಉಲ್ಲೇಖಿಸಿದ ಮಮತಾ, “ನನ್ನನ್ನು ತಳ್ಳಿದ ಪರಿಣಾಮ ಎದೆನೋವು ಕಾಣಿಸಿಕೊಂಡಿತ್ತು” ಎಂದೂ ಹೇಳಿದರು.
ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿರುವುದು ಪಶ್ಚಿಮ ಬಂಗಾಳದಲ್ಲಿ ಅಪರೂಪದ ರಾಜಕೀಯ ಹಾಗೂ ಸಂವಿಧಾನಾತ್ಮಕ ಚರ್ಚೆಗೆ ಕಾರಣವಾಗಿದೆ.
ಇನ್ನೊಂದೆಡೆ, 207 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿರುವ ಭಾರತೀಯ ಜನತಾ ಪಾರ್ಟಿ ಸರ್ಕಾರ ರಚನೆಗೆ ಸಜ್ಜಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ಧವಾಗಿದೆ.