ಕೊಲೆ ಆರೋಪಿಯ ಬಾಯಲ್ಲಿ ಕಾನೂನು ಪಾಠ; ಪೊಲೀಸ್ ಇಲಾಖೆಗೆ ಬಹಿರಂಗ ಸವಾಲ್ – ಸಮುದಾಯದ ವಿರುದ್ಧ ದ್ವೇಷ ಹರಡುವ ಹೇಳಿಕೆ ಎಸ್.ಡಿ.ಪಿ.ಐ ಖಂಡನೆ.

ಮಂಗಳೂರು: ಮಂಗಳೂರು ನಗರದಲ್ಲಿ ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಾಸದ ಹೆಸರಿನಲ್ಲಿ, “ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರಿನ ಮಾದರಿಯಲ್ಲೇ ನಾವು ಕಾರ್ಯಾಚರಣೆ ನಡೆಸುತ್ತೇವೆ” ಎಂದು ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ಬಹಿರಂಗವಾಗಿ ನೀಡಿರುವ ಹೇಳಿಕೆ ಕಾನೂನಿನ ಆಡಳಿತಕ್ಕೆ ಎಸೆದ ಸವಾಲು ಮಾತ್ರವಲ್ಲ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವ ಅತ್ಯಂತ ಅಪಾಯಕಾರಿ ಹೇಳಿಕೆಯಾಗಿದೆ ಎಂದು ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಯೊಬ್ಬನು ಪೊಲೀಸ್ ಇಲಾಖೆಯ ಪಾತ್ರವನ್ನು ತಾನೇ ವಹಿಸಿಕೊಂಡು “ನಾವೇ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಬಹಿರಂಗವಾಗಿ ಘೋಷಿಸುವುದು ಕಾನೂನು ಸುವ್ಯವಸ್ಥೆಯನ್ನು ಧಿಕ್ಕರಿಸುವ ದುಸ್ಸಾಹಸವಾಗಿದೆ. ಕಾನೂನು ಜಾರಿಗೊಳಿಸುವ ಅಧಿಕಾರ ಸಂವಿಧಾನಬದ್ಧವಾಗಿ ಪೊಲೀಸ್ ಇಲಾಖೆಗೆ ಮಾತ್ರ ಸೇರಿದ್ದು, ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಘಟನೆಗೆ ಅಲ್ಲ.
ಇನ್ನೂ ಗಂಭೀರವಾದ ಸಂಗತಿಯೆಂದರೆ, ಈ ಹೇಳಿಕೆ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅನುಮಾನ, ದ್ವೇಷ ಮತ್ತು ಭಯದ ವಾತಾವರಣ ನಿರ್ಮಿಸಲು ಮಾಡಿದ ಪ್ರಯತ್ನವಾಗಿದೆ.

ಯಾವುದೇ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸುವುದು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವುದಲ್ಲದೆ, ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಚೋದಿಸುವ ಅಪಾಯಕಾರಿ ಪ್ರವೃತ್ತಿಯಾಗಿದೆ.
ಕೊಲೆ ಆರೋಪಿಯೊಬ್ಬನು ಮಾಧ್ಯಮಗಳ ಮುಂದೆ ನಿಂತು ಪೊಲೀಸ್ ಇಲಾಖೆಗೆ ಬಹಿರಂಗ ಸವಾಲ್ ಹಾಕುತ್ತಿದ್ದರೂ, ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯನ್ನು ಪ್ರಶ್ನಿಸುವಂತಾಗಿದೆ. ಸಾಮಾನ್ಯ ನಾಗರಿಕನೊಬ್ಬ ಇಂತಹ ಹೇಳಿಕೆ ನೀಡಿದ್ದರೆ ಇದೇ ರೀತಿ ಮೌನ ವಹಿಸಲಾಗುತ್ತಿತ್ತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಆದ್ದರಿಂದ, ಪೊಲೀಸ್ ಇಲಾಖೆ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (Suo Motu) ದಾಖಲಿಸಿಕೊಂಡು, ಕಾನೂನಿಗೆ ಸವಾಲೊಡ್ಡಿರುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಹಾಗೂ ಸಮುದಾಯಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಸಂಬಂಧಿತ ಕಾನೂನುಗಳಡಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.

ಕಾನೂನು ಎಲ್ಲರಿಗೂ ಒಂದೇ. ಕೊಲೆ ಆರೋಪಿಯೊಬ್ಬನಿಗೆ ಕಾನೂನು ಜಾರಿಗೊಳಿಸುವ ಅಧಿಕಾರವಿದೆ ಎಂಬ ಭ್ರಮೆ ಮೂಡುವಂತೆ ಅವಕಾಶ ನೀಡಿದರೆ, ಅದು ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ಕಾನೂನಿನ ಆಡಳಿತದ ಮೇಲಿನ ಜನರ ನಂಬಿಕೆಗೆ ದೊಡ್ಡ ಹೊಡೆತವಾಗಲಿದೆ. ಪ್ರಜಾಪ್ರಭುತ್ವದಲ್ಲಿ ಗುಂಪುಗಳ ಬೆದರಿಕೆ ಅಲ್ಲ, ಸಂವಿಧಾನ ಮತ್ತು ಕಾನೂನೇ ಅಂತಿಮ ಅಧಿಕಾರ ಎಂಬುದನ್ನು ಪೊಲೀಸ್ ಇಲಾಖೆ ತನ್ನ ಕ್ರಮದ ಮೂಲಕ ಸಾಬೀತುಪಡಿಸಬೇಕು ಎಂದು ಜಮಾಲ್ ಜೋಕಟ್ಟೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!