ಕಾಸರಗೋಡು/ಕಣ್ಣೂರು: ಪಯ್ಯನ್ನೂರಿನಲ್ಲಿ ಒಂದೂವರೆ ವರ್ಷದ ಬಾಲಕ ದೇವಾಂಶ ಶೌರ್ಯ ಚಿಕಿತ್ಸೆ ವೇಳೆ ಮೃತಪಟ್ಟ ಪ್ರಕರಣದಲ್ಲಿ ವೈದ್ಯರ ಗಂಭೀರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.ಅರಿವಳಿಕೆ ನೀಡಿದ ತಕ್ಷಣ ಬಾಲಕನ ಮೆದುಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದೇ ಸಾವಿಗೆ ಕಾರಣ ಎಂದು ವರದಿ ತಿಳಿಸಿದೆ.

ಆಟವಾಡುವಾಗ ಬಿದ್ದಿದ್ದ ಬಾಲಕನಿಗೆ ಹೊಲಿಗೆ ಹಾಕುವ ಉದ್ದೇಶದಿಂದ ನೀಡಿದ ಅರಿವಳಿಕೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ಲೋಪವಾಗಿದೆ. ಮಗುವಿಗೆ ಸಾಮಾನ್ಯ ಅರಿವಳಿಕೆ ನೀಡುವ ಅಗತ್ಯವಿರಲಿಲ್ಲ ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿದೆ.ಈ ಪ್ರಕರಣದಲ್ಲಿ ಯಾವುದೇ ತಪ್ಪಾಗಿಲ್ಲ ಎಂಬ ಆಸ್ಪತ್ರೆ ಆಡಳಿತ ಮಂಡಳಿಯ ವಾದವನ್ನು ಈ ವರದಿ ಸುಳ್ಳಾಗಿಸಿದೆ. ಅರಿವಳಿಕೆ ನೀಡಿದ ಡಾ. ಅಂಜಲಿ ಪೊದುವಾಳ್ ವಿರುದ್ಧ ಪಯ್ಯನ್ನೂರು ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

ಮಗುವಿನ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವೈದ್ಯಕೀಯ ಮಂಡಳಿ ಹಸಿರು ನಿಶಾನೆ ತೋರಿದ್ದು, ವರದಿಯನ್ನು ಪೊಲೀಸರಿಗೆ ಶೀಘ್ರವೇ ಹಸ್ತಾಂತರಿಸಲಾಗುವುದಾಗಿ ತಿಳಿದು ಬಂದಿದೆ.


