ಹೊಸದಿಲ್ಲಿ, ಜು. 18: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಬಹರೈನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಹಾಗೂ ಇಂಧನ ಸಂಗ್ರಹ ಟ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿದೆ.

ಇರಾನ್‌ನ ತಸ್ನಿಂ ಸುದ್ದಿ ಸಂಸ್ಥೆ ವರದಿ ಪ್ರಕಾರ, ಬಹರೈನ್‌ನಲ್ಲಿನ ಅಮೆರಿಕದ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಯುಎಸ್ ಮಿಲಿಟರಿ ಸ್ವತ್ತುಗಳು ಹಾಗೂ ಇಂಧನ ಟ್ಯಾಂಕ್‌ಗಳಿಗೆ ಹಾನಿಯಾಗಿದೆ. ದಾಳಿಯಲ್ಲಿ ಶೇಖ್ ಈಸಾ ವಾಯುನೆಲೆಯ ವಿಮಾನ ನಿಲುಗಡೆ ಪ್ರದೇಶವೂ ಗುರಿಯಾಗಿತ್ತು ಎಂದು ತಿಳಿಸಲಾಗಿದೆ.

ಜಾಗತಿಕ ದುರಹಂಕಾರದ ವಿರುದ್ಧದ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ಹೇಳಿದ್ದು, ಅಮೆರಿಕವು ಶೇಖ್ ಈಸಾ ವಾಯುನೆಲೆಯನ್ನು ಪ್ರಾದೇಶಿಕ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ಇರಾನ್ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಆದರೆ, ದಾಳಿಯಿಂದ ಉಂಟಾದ ಹಾನಿಯ ಪ್ರಮಾಣ ಹಾಗೂ ಸಂಭವನೀಯ ಸಾವು-ನೋವಿನ ಕುರಿತು ಅಮೆರಿಕ ಅಥವಾ ಬಹರೈನ್ ಸರ್ಕಾರದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

