ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಿರಂತರ ಮಳೆ, ಭೂಕುಸಿತ ಹಾಗೂ ಭಾರತೀಯ ಹವಾಮಾನ ಇಲಾಖೆಯ ಕೆಂಪು ಮತ್ತು ಕಿತ್ತಳೆ ಅಲರ್ಟ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರದಿಂದ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೇದಾರನಾಥ, ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಮಾರ್ಗಗಳಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಯಾತ್ರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಗಗಳು ಸುರಕ್ಷಿತವೆಂದು ಘೋಷಿಸಿದ ಬಳಿಕವೇ ಯಾತ್ರೆ ಪುನರಾರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈಗಾಗಲೇ ಮಾರ್ಗದಲ್ಲಿರುವ ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ತಂಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ರಸ್ತೆ ತೆರವು ಕಾರ್ಯ ಪೂರ್ಣಗೊಳ್ಳುವವರೆಗೆ ಹೊಸದಾಗಿ ಯಾತ್ರೆಗೆ ಅವಕಾಶ ಇರುವುದಿಲ್ಲ.

ಈ ನಡುವೆ, ಈ ವರ್ಷದ ಚಾರ್ ಧಾಮ್ ಯಾತ್ರೆಯಲ್ಲಿ ಇದುವರೆಗೆ 44.84 ಲಕ್ಷಕ್ಕೂ ಅಧಿಕ ಭಕ್ತರು ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮುನೋತ್ರಿ ಹಾಗೂ ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.


