ಹೊಸದಿಲ್ಲಿ: ಸಂಸತ್ತಿನತ್ತ ಮೆರವಣಿಗೆ ನಡೆಸಿದ ಸಿಜೆಪಿ ನೇತೃತ್ವದ ಪ್ರತಿಭಟನಾಕಾರರು ಭದ್ರತಾ ಬ್ಯಾರಿಕೇಡ್ಗಳನ್ನು ಭೇದಿಸಿ ಮುನ್ನಡೆಯಲು ಯತ್ನಿಸಿದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಉದ್ವಿಗ್ನಗೊಂಡಿತು. ಪ್ರತಿಭಟನಾಕಾರರನ್ನು ತಡೆಯಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿ, ಲಾಠಿಚಾರ್ಜ್ ನಡೆಸಿದವು.ಶಾಸ್ತ್ರಿ ಭವನ, ರೈಸಿನಾ ರಸ್ತೆ, ಜನಪಥ್ ಹಾಗೂ ಅಶೋಕ ರಸ್ತೆ ಪ್ರದೇಶಗಳಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಕ್ರಮ ಕೈಗೊಂಡರು. ಭದ್ರತಾ ಮುನ್ನೆಚ್ಚರಿಕೆಯಾಗಿ ಸಂಸತ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಪ್ರತಿಭಟನಾಕಾರರು ಸಂಸತ್ ಸಮೀಪದ ರೈಲ್ ಭವನ, ಶಾಸ್ತ್ರಿ ಭವನ, ಕೃಷಿ ಭವನ ಹಾಗೂ ಬೋಟ್ ಕ್ಲಬ್ ಪ್ರದೇಶದವರೆಗೂ ತಲುಪಿದರೆಂದು ವರದಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಮವಸ್ತ್ರಧಾರಿ ಹಾಗೂ ನಾಗರಿಕ ಉಡುಪಿನಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು.

ಬೆಳಿಗ್ಗೆ ಸುಮಾರು 11.25ರ ವೇಳೆಗೆ ಪ್ರತಿಭಟನಾಕಾರರು ಹಲವು ಬ್ಯಾರಿಕೇಡ್ಗಳನ್ನು ತಳ್ಳಿಕೊಂಡು ಮುಂದೆ ಸಾಗಲು ಯತ್ನಿಸಿದಾಗ, ನೂಕಾಟ-ತಳ್ಳಾಟ ಉಂಟಾಯಿತು. ಈ ವೇಳೆ ಕೆಲವು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.ಪಿಟಿಐ ವರದಿ ಪ್ರಕಾರ, ಘಟನೆಯ ಸಂಬಂಧ ಸುಮಾರು 10 ರಿಂದ 15 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

