ಮಂಗಲ್ಪಾಡಿ ಮತ್ತು ಮೀಂಜ ಪಂಚಾಯತುಗಳನ್ನು ಸಂಪರ್ಕಿಸುವ ದೇರಂಬಳ ಕಾಲ್ನಡಿಗೆಯ ಕಾಂಕ್ರೀಟ್ ಸೇತುವೆ ಸಂಪೂರ್ಣ ಶಿಥಿಲಗೊಂಡು ಕುಸಿದಿದ್ದು, ಹೊಸ ಸೇತುವೆ ನಿರ್ಮಾಣವಾಗದ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಬಗ್ಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನರ ಸಂಚಾರಕ್ಕೆ ಮೂಲಭೂತ ಸೌಲಭ್ಯ ಒದಗಿಸದಿರುವುದು ನಾಗರಿಕರ ಮೇಲಿನ ಅನ್ಯಾಯ ಹಾಗೂ ಜನದ್ರೋಹ ಎಂದು ಆರೋಪಿಸಿದ್ದಾರೆ.


ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸುವ ಈ ಮಾರ್ಗದ ಸೇತುವೆ ಕುಸಿದ ಪರಿಣಾಮ, ಕೇವಲ 600 ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣ ತಲುಪಲು ಈಗ ಹಲವು ಕಿಲೋಮೀಟರ್ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಇದೇ ಸೇತುವೆ ದಾಟುವ ವೇಳೆ ಯುವತಿಯೊಬ್ಬರು ಹೊಳೆಗೆ ಬಿದ್ದು ಪ್ರವಾಹದಲ್ಲಿ ಸಿಲುಕಿದ್ದು, ಸ್ಥಳೀಯ ನಿವಾಸಿ ಉದಯ ಶೆಟ್ಟಿ ಪ್ರಾಣದ ಹಂಗು ತೊರೆದು ನೀರಿಗೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಯುವತಿಯ ಬ್ಯಾಗಿನಲ್ಲಿದ್ದ ಮೊಬೈಲ್, ಅಮೂಲ್ಯ ದಾಖಲೆಗಳು ಹಾಗೂ ಔಷಧಿಗಳು ನೀರಿನಲ್ಲಿ ಕಳೆದುಹೋಗಿವೆ.

ಇಂತಹ ಘಟನೆಗಳು ಮರುಕಳಿಸದಂತೆ ದೇರಂಬಳದಲ್ಲಿ ಹೊಸ ಕಾಲ್ನಡಿಗೆಯ ಸೇತುವೆಯನ್ನು ತುರ್ತು ಆದ್ಯತೆಯ ಮೇರೆಗೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.



