ಜು. 22: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಪಾವಸಂದ್ರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ ಎನ್ನಲಾದ 12 ಕಾರ್ಮಿಕರನ್ನು ರಕ್ಷಿಸಿದ್ದಾರೆ.


ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ವೇಳೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಭಾಗದ ಕಾರ್ಮಿಕರಿಗೆ ಮುಂಗಡ ಹಣ ನೀಡಿ, ಸುಮಾರು 20 ವರ್ಷಗಳಿಂದ ಜೀತದಾಳುಗಳಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

‘ಮುಕ್ತಿ’ ಸ್ವಯಂಸೇವಾ ಸಂಸ್ಥೆ ನೀಡಿದ ದೂರಿನ ಮೇರೆಗೆ ತುಮಕೂರು ಉಪವಿಭಾಗಾಧಿಕಾರಿ ನಹಿದಾ ಜಮ್ ಜಮ್ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು, ಐವರು ಮಹಿಳೆಯರು ಹಾಗೂ ಐವರು ಪುರುಷರು ಸೇರಿದಂತೆ ಒಟ್ಟು 12 ಮಂದಿಯನ್ನು ರಕ್ಷಿಸಿದೆ.

ರಕ್ಷಿಸಲ್ಪಟ್ಟವರಲ್ಲಿ ಚೆಲುವ ಭೋವಿ (45), ಸರಸ್ವತಿ (40), ಪಳನಿ (50), ಸರೋಜಾ (40), ಸೌಮ್ಯ (40), ಪುರುಷೋತ್ತಮ (20), ರವಿ (20), ಪವಿತ್ರಾ (25), ಕೃಷ್ಣ (25), ಮಂಜುಳಾ (35), ಆರ್ಮುಗಮ್ (56) ಹಾಗೂ ಭಾಗ್ಯಮ್ಮ (47) ಸೇರಿದ್ದಾರೆ.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಗಣಿಗಾರಿಕೆ ಹಾಗೂ ಜೀತ ಪದ್ಧತಿ ಆರೋಪಗಳ ಕುರಿತು ಪೊಲೀಸರು ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

