‘ಆಪರೇಷನ್ ವಿಜಯ್’ ಯಶಸ್ಸಿಗೆ ಯುವ ನಾಯಕತ್ವ, ಬೋಫೋರ್ಸ್ ಫಿರಂಗಿಗಳೇ ಪ್ರಮುಖ ಕಾರಣ: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಮಂಗಳೂರು: ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಶೌರ್ಯ, ಯುವ ನಾಯಕತ್ವ ಹಾಗೂ ಅತ್ಯುತ್ತಮ ಯುದ್ಧತಂತ್ರಕ್ಕೆ ಸಾಕ್ಷಿಯಾದ ಸಮರವಾಗಿದೆ. ಯುವ ಅಧಿಕಾರಿಗಳ ಮುಂಚೂಣಿ ನಾಯಕತ್ವ ಮತ್ತು ಬೋಫೋರ್ಸ್ ಫಿರಂಗಿಗಳ ಪರಿಣಾಮಕಾರಿ ಬಳಕೆಯೇ ಭಾರತದ ವಿಜಯಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1984ರ ‘ಆಪರೇಷನ್ ಮೇಘದೂತ್’ ಬಳಿಕ ಭಾರತೀಯ ಸೇನೆ ಕಾರ್ಗಿಲ್ ಪ್ರದೇಶದ ಪ್ರಮುಖ ಶಿಖರಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟಿತ್ತು. ಆದರೆ 1999ರಲ್ಲಿ ಪಾಕಿಸ್ತಾನ ‘ಆಪರೇಷನ್ ಬದ್ರ್’ ಮೂಲಕ ಅತಿಕ್ರಮಣ ನಡೆಸಿದ ಬಳಿಕ, ಭಾರತೀಯ ಸೇನೆ ‘ಆಪರೇಷನ್ ವಿಜಯ್’, ವಾಯುಪಡೆಯ ‘ಆಪರೇಷನ್ ಸಫೇದ್ ಸಾಗರ್’ ಹಾಗೂ ನೌಕಾಪಡೆಯ ‘ಆಪರೇಷನ್ ತಲ್ವಾರ್’ ಮೂಲಕ ಸಮನ್ವಯ ಕಾರ್ಯಾಚರಣೆ ನಡೆಸಿ ಜುಲೈ 26ರಂದು ಕೊನೆಯ ಪಾಕಿಸ್ತಾನಿ ನೆಲೆಯನ್ನು ವಶಪಡಿಸಿಕೊಂಡಿತು ಎಂದು ವಿವರಿಸಿದರು.

ಕಾರ್ಗಿಲ್ ವಿಜಯಕ್ಕೆ ಎರಡು ಅಂಶಗಳು ನಿರ್ಣಾಯಕವಾಗಿದ್ದವು. ಲೆಫ್ಟಿನೆಂಟ್‌, ಕ್ಯಾಪ್ಟನ್ ಸೇರಿದಂತೆ ಯುವ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಯುದ್ಧವನ್ನು ಮುನ್ನಡೆಸಿದರೆ, ಬೋಫೋರ್ಸ್ ಸೇರಿದಂತೆ ಸುಮಾರು 300 ಫಿರಂಗಿಗಳಿಂದ 2.5 ಲಕ್ಷಕ್ಕೂ ಹೆಚ್ಚು ಶೆಲ್‌ಗಳನ್ನು ಹಾರಿಸಲಾಗಿತ್ತು. ಯುದ್ಧದಲ್ಲಿ ಭಾರತೀಯ ಸೇನೆಯ 526ಕ್ಕೂ ಅಧಿಕ ಯೋಧರು ವೀರಮರಣ ಹೊಂದಿದ್ದು, ನಾಲ್ಕು ಪರಮವೀರ ಚಕ್ರ ಸೇರಿದಂತೆ ಅನೇಕ ಶೌರ್ಯ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಟರನ್ ಶ್ರೀಕಾಂತ್ ಶೆಟ್ಟಿ, ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ವೆಟರನ್ ಸುಧೀರ್ ಪೈ ಹಾಗೂ ಉಪಾಧ್ಯಕ್ಷ ಕರ್ನಲ್ ಎ.ಕೆ. ಜಯಚಂದ್ರನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!