ಮಂಗಳೂರು: ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಪರಿಹರಿಸಬೇಕು ಎಂದು ರಾಜ್ಯ ಪರ್ಸೀನ್ ಮೀನುಗಾರರ ಸಂಘ ಮತ್ತು ಟ್ರಾಲ್ ಬೋಟ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮೀನುಗಾರಿಕಾ ಬಂದರು ಸಾವಿರಾರು ಬೋಟ್‌ಗಳ ಮೂಲಕ ರಾಜ್ಯ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಆದರೆ ಇಲ್ಲಿನ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ ಎಂದರು.

ಹೂಳೆತ್ತುವಿಕೆ ಕೂಡಲೇ ಆಗಬೇಕು
ಬಂದರಿನಲ್ಲಿ ಹಲವು ವರ್ಷಗಳಿಂದ ಹೂಳೆತ್ತುವ ಕೆಲಸ ನಡೆದಿಲ್ಲ. ಇದರಿಂದ ಅಳಿವೆ ಬಾಗಿಲು, ಕ್ರೀಕ್ ಪ್ರದೇಶ ಮತ್ತು ಬೋಟ್‌ಗಳು ನಿಲ್ಲುವ ಸ್ಥಳಗಳಲ್ಲಿ ಹೂಳು ಸಂಗ್ರಹವಾಗಿ ಬೋಟ್‌ಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಳಿವೆ ಬಾಗಿಲಲ್ಲಿ ಹೂಳು ತುಂಬಿರುವ ಕಾರಣ ಹಲವಾರು ಬೋಟ್‌ಗಳು ಜಖಂಗೊಂಡಿದ್ದು, ಮೀನುಗಾರರ ಪ್ರಾಣಹಾನಿಯೂ ಸಂಭವಿಸಿದೆ. ಆದ್ದರಿಂದ ಆದ್ಯತೆಯ ಮೇರೆಗೆ ಕೂಡಲೇ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಅಗತ್ಯ
ಪ್ರಸ್ತುತ ಬಂದರಿನಲ್ಲಿ 4,000 ಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳು ಕಾರ್ಯಾಚರಿಸುತ್ತಿದ್ದು, ಮೀನು ಇಳಿಸಲು, ಐಸ್ ಮತ್ತು ಬಲೆ ಸಾಮಗ್ರಿಗಳನ್ನು ತುಂಬಲು ಸ್ಥಳದ ಕೊರತೆ ಎದುರಾಗಿದೆ. ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸೂಕ್ತ ನೀಲನಕ್ಷೆ ತಯಾರಿಸಿ ಮೂಲಸೌಕರ್ಯಗಳನ್ನು ನಿರ್ಮಿಸಬೇಕು.
ನಮ್ಮ ಸಂಘದ ಸತತ ಪ್ರಯತ್ನದ ಫಲವಾಗಿ 1 ಮತ್ತು 2ನೇ ಹಂತದ ಜೆಟ್ಟಿಗೆ ರೂ. 37.50 ಕೋಟಿ ಹಾಗೂ 3ನೇ ಹಂತದ ಬಂದರಿಗೆ ರೂ. 49.50 ಕೋಟಿ ಅನುದಾನವನ್ನು ಸರ್ಕಾರ ಮಂಜೂರು ಮಾಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಸರ್ಕಾರಕ್ಕೆ ಮೀನುಗಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಕಾಮಗಾರಿ ಪ್ರಗತಿಯಲ್ಲಿದ್ದರೂ ಪೂರ್ಣಗೊಂಡಿಲ್ಲ. ಇದರಿಂದ ದಿನನಿತ್ಯ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಜೆಟ್ಟಿ ನಿರ್ಮಾಣಕ್ಕೆ ಬೇಡಿಕೆ
ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ನೀಗಿಸಲು ಸುಮಾರು 800 ರಿಂದ 1000 ಮೀಟರ್ ಉದ್ದದ ಹೆಚ್ಚುವರಿ ಜೆಟ್ಟಿ ಅಗತ್ಯವಿದೆ. 3ನೇ ಹಂತದ ಬಂದರಿನಿಂದ ಕೆ.ಎಫ್.ಡಿ.ಸಿ ವರೆಗಿನ 250 ಮೀಟರ್ ಉದ್ದದ ನೇತ್ರಾವತಿ ತೀರವನ್ನು ಮೀನುಗಾರಿಕಾ ಬಂದರಾಗಿ ಅಭಿವೃದ್ಧಿಪಡಿಸಬೇಕು.
ಅಲ್ಲದೆ, ಬಂದರಿನ ಒಳಭಾಗದಲ್ಲೇ ರಖಂ ಮತ್ತು ಕಮಿಷನ್ ಮೀನು ಮಾರಾಟ ನಡೆಯುತ್ತಿರುವುದರಿಂದ ಇತರ ರಾಜ್ಯಗಳಿಂದ ಬರುವ 200ಕ್ಕೂ ಹೆಚ್ಚು ವಾಹನಗಳಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಮಾರುಕಟ್ಟೆಯನ್ನು ಮೀನುಗಾರಿಕಾ ಕಾಲೇಜಿಗೆ ಸೇರಿದ 3 ಎಕರೆ ಜಾಗಕ್ಕೆ ಸ್ಥಳಾಂತರಿಸಿ ಬಂದರಿನ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಮೋಹನ್ ಬೆಂಗ್ರೆ, ಫೈಝಲ್, ಸಲೀಂ ನರಿಂಗಾನ, ರಾಜೇಶ್ ಉಪಸ್ಥಿತರಿದ್ದರು.

