ಮಂಗಳೂರು, ಜು.24: ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆರ್‌ವಿಆರ್ ಹೆಲ್ತ್‌ಕೇರ್, ಕೇರಳದ ಕಾಸರಗೋಡಿನಲ್ಲಿ ಜುಲೈ 26ರಂದು ನೂತನ ನ್ಯೂರೋ-ಆಂಕಾಲಜಿ ಕೇಂದ್ರವನ್ನು ಆರಂಭಿಸುವುದಾಗಿ ಹಾಗೂ ತನ್ನ ಸಮುದಾಯ ಆರೋಗ್ಯ ಕಾರ್ಯಕ್ರಮ ‘ಆರೋಗ್ಯ ಬೈ ಆರ್‌ವಿಆರ್’ ಅನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದೆ.

ನಗರದ ದಿ ಓಶನ್ ಪರ್ಲ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಹಾಗೂ ಹಿರಿಯ ನರಶಸ್ತ್ರಚಿಕಿತ್ಸಕರಾದ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್. ಈ ಮಾಹಿತಿ ನೀಡಿದರು.2026ರ ಏಪ್ರಿಲ್‌ನಲ್ಲಿ ಆರಂಭಗೊಂಡ ಆರ್‌ವಿಆರ್ ಹೆಲ್ತ್‌ಕೇರ್, ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ವೈದ್ಯರ ತಂಡ ಹಾಗೂ ರೋಗಿಕೇಂದ್ರಿತ ಚಿಕಿತ್ಸಾ ವ್ಯವಸ್ಥೆಯ ಮೂಲಕ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.

ಜುಲೈ 26ರಂದು ಕಾಸರಗೋಡಿನಲ್ಲಿ ಆರಂಭಗೊಳ್ಳಲಿರುವ ನ್ಯೂರೋ-ಆಂಕಾಲಜಿ ಕೇಂದ್ರದಲ್ಲಿ ನರವ್ಯವಸ್ಥೆಗೆ ಸಂಬಂಧಿಸಿದ ಕ್ಯಾನ್ಸರ್ ಸೇರಿದಂತೆ ಸಂಕೀರ್ಣ ಕಾಯಿಲೆಗಳ ನಿರ್ಣಯ ಮತ್ತು ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ದಕ್ಷಿಣ ಕನ್ನಡ ಹಾಗೂ ಉತ್ತರ ಕೇರಳ ಭಾಗದ ರೋಗಿಗಳಿಗೆ ವಿಶೇಷ ವೈದ್ಯಕೀಯ ಸೇವೆ ಮತ್ತಷ್ಟು ಸುಲಭವಾಗಿ ದೊರೆಯಲಿದೆ ಎಂದು ಹೇಳಿದರು.

ಸಂಸ್ಥೆಯ ‘ಆರೋಗ್ಯ ಬೈ ಆರ್‌ವಿಆರ್’ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರ ಸಮಾಲೋಚನೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಈ ಯೋಜನೆಯನ್ನು ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯ್ ಎಂ.ಎನ್. ಶೆಟ್ಟಿ ಅವರ ನೇತೃತ್ವದಲ್ಲಿ ಆರ್‌ವಿಆರ್ ಹೆಲ್ತ್‌ಕೇರ್ ತನ್ನ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯ್ ಎಂ.ಎನ್. ಶೆಟ್ಟಿ, ಆರ್‌ವಿಆರ್ ನ್ಯೂರೋ-ಆಂಕಾಲಜಿ ತಂಡದ ಪ್ರಮುಖರಾದ ಡಾ. ವಿಗ್ನೇಶ್ ಸಂಪತ್ ಅಯ್ಯರ್, ಡಾ. ಅಬು ಟಿ. ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.

