ತುಳುನಾಡು ತನ್ನ ಶ್ರೀಮಂತ ಸಂಸ್ಕೃತಿ, ನಾಗಾರಾಧನೆ, ದೈವಾರಾಧನೆ ಹಾಗೂ ಶತಮಾನಗಳ ಧಾರ್ಮಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಈ ಪವಿತ್ರ ನೆಲದಲ್ಲಿರುವ ಮಂಗಳೂರು ತಾಲೂಕಿನ ನೀರುಮಾರ್ಗ ಗ್ರಾಮದ ಮಾಣೂರಿನ ಶ್ರೀ ಸುಬ್ರಾಯ ದೇವಸ್ಥಾನವು ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ನಾಗಾರಾಧನೆಯ ಮಹತ್ವವನ್ನು ಸಾರುವ ಪ್ರಮುಖ ಕ್ಷೇತ್ರವಾಗಿದೆ.

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು ಮೂಲತಃ ‘ಶ್ರೀ ಸುಬ್ರಾಯ ದೇವಸ್ಥಾನ’ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿತ್ತು. ಕಾಲಕ್ರಮೇಣ ವಿವಿಧ ಕಾರಣಗಳಿಂದ ‘ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ’ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆ ಹಾಗೂ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ದೇವಾಲಯವು ತನ್ನ ಮೂಲ ಹೆಸರಾದ ‘ಶ್ರೀ ಸುಬ್ರಾಯ ದೇವಸ್ಥಾನ’ಕ್ಕೆ ಮರುನಾಮಕರಣಗೊಂಡಿದೆ.

ಮರುನಾಮಕರಣದೊಂದಿಗೆ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಹಾಗೂ ಶಾಸ್ತ್ರೋಕ್ತ ಪುನಃಪ್ರತಿಷ್ಠಾಪನೆ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಗರ್ಭಗುಡಿ, ಧ್ವಜಸ್ತಂಭ, ಪ್ರಾಂಗಣ ಸೇರಿದಂತೆ ದೇವಾಲಯದ ಸಂಪೂರ್ಣ ವ್ಯವಸ್ಥೆಯನ್ನು ಆಗಮಶಾಸ್ತ್ರದ ಪ್ರಕಾರ ನವೀಕರಿಸಲಾಗಿದೆ. ಬ್ರಹ್ಮಕಲಶ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಕ್ಷೇತ್ರದ ಪುನರುಜ್ಜೀವನಕ್ಕೆ ಸಾಕ್ಷಿಯಾದರು.

ಸ್ಥಳೀಯ ಐತಿಹ್ಯದ ಪ್ರಕಾರ, ಮನ್ವ ಋಷಿಗಳು ಇಲ್ಲಿ ತಪಸ್ಸು ನಡೆಸಿದ್ದು, ಅವರ ಭಕ್ತಿಗೆ ಮೆಚ್ಚಿದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಈ ಕ್ಷೇತ್ರದಲ್ಲಿ ನೆಲೆಸಿದರು ಎಂಬ ನಂಬಿಕೆ ಇದೆ. ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುವ ದಂಪತಿಗಳು ಇಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಮನೋಕಾಮನೆ ಈಡೇರುತ್ತದೆ ಎಂಬ ಗಾಢ ನಂಬಿಕೆ ಇಂದಿಗೂ ಭಕ್ತರಲ್ಲಿ ಜೀವಂತವಾಗಿದೆ.
ತುಳುನಾಡಿನ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾಗಿರುವ ಈ ದೇವಸ್ಥಾನದಲ್ಲಿ ನಾಗದೋಷ ನಿವಾರಣೆ, ಕುಟುಂಬದ ಕ್ಷೇಮ, ಆರೋಗ್ಯ ಹಾಗೂ ಐಶ್ವರ್ಯಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವರ ಆರಾಧನೆ ಇಲ್ಲಿ ಅವಿಭಾಜ್ಯವಾಗಿ ಬೆಸೆದುಕೊಂಡಿದೆ.

ಮಯೂರ ದರ್ಶನ – ಕ್ಷೇತ್ರದ ವಿಶೇಷ ಆಕರ್ಷಣೆ
ದೇವಸ್ಥಾನದ ಮತ್ತೊಂದು ವಿಶಿಷ್ಟ ಆಕರ್ಷಣೆ ‘ಮಯೂರ’ ಎಂಬ ನವಿಲು. ಸುಮಾರು ಏಳು ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನ ಆವರಣದಲ್ಲಿ ಕಾಣಿಸಿಕೊಂಡ ಈ ನವಿಲು ಇಂದಿಗೂ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.

ಪ್ರತಿದಿನ ಪೂಜೆಯ ಸಮಯದಲ್ಲಿ ದೇವಸ್ಥಾನಕ್ಕೆ ಆಗಮಿಸಿ ಗರಿ ಬಿಚ್ಚಿ ನರ್ತಿಸುವ ಮಯೂರನ ದರ್ಶನ ಭಕ್ತರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಾಹನವೇ ನವಿಲು ಎಂಬ ನಂಬಿಕೆಯಿಂದ ಅನೇಕರು ಇದನ್ನು ದೈವಿಕ ಅನುಗ್ರಹದ ಸಂಕೇತವೆಂದು ಪರಿಗಣಿಸುತ್ತಾರೆ.ಮುಂಬೈ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಆಗಮಿಸುವ ಭಕ್ತರು ಮಯೂರ ದರ್ಶನಕ್ಕಾಗಿ ವಿಶೇಷ ಆಸಕ್ತಿ ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಚಿತ್ರಗಳು ಮತ್ತು ವಿಡಿಯೊಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ದೇವಸ್ಥಾನದ ಆಡಳಿತ ಮಂಡಳಿ ಮಯೂರದ ಆರೈಕೆಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಇಂದು ಅದು ಕೇವಲ ಒಂದು ನವಿಲಲ್ಲ; ಶ್ರೀ ಸುಬ್ರಾಯ ಕ್ಷೇತ್ರದ ಜೀವಂತ ಗುರುತು, ಭಕ್ತರ ಭಾವನಾತ್ಮಕ ಒಡನಾಡಿ ಹಾಗೂ ದೈವಿಕ ಅನುಭವದ ಪ್ರತೀಕವಾಗಿ ಗುರುತಿಸಿಕೊಂಡಿದೆ.ಇತಿಹಾಸ, ನಾಗಾರಾಧನೆ, ಆಧ್ಯಾತ್ಮಿಕತೆ ಹಾಗೂ ಭಕ್ತಿಯ ಅಪೂರ್ವ ಸಂಗಮವಾಗಿರುವ ಮಾಣೂರಿನ ಶ್ರೀ ಸುಬ್ರಾಯ ದೇವಸ್ಥಾನ ಇಂದು ತುಳುನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿ ಸಾವಿರಾರು ಭಕ್ತರ ನಂಬಿಕೆಯ ದೀಪವಾಗಿ ಬೆಳಗುತ್ತಿದೆ.

ಗಿರೀಶ್ ಪಿಎಂ
ಕಾಸರಗೋಡು

