ಮಂಗಳೂರು:
ಬಾಗಲಕೋಟೆಯಲ್ಲಿ ₹5.5 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಮಂಗಳೂರು ಸಿಸಿಬಿ ಪೊಲೀಸರಿಗೆ ಬೇಕಾಗಿರುವ ನಾಲ್ಕನೇ ಆರೋಪಿ ಜಲೀಲ್ @ ಬಾಬಾ (42) ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಳ್ತಂಗಡಿ ಮೂಲದ ಜಲೀಲ್, ಆ್ಯಂಬುಲೆನ್ಸ್‌ನ್ನೇ ಡ್ರಗ್ಸ್ ಸಾಗಾಟ ಮತ್ತು ಪೆಡ್ಲಿಂಗ್‌ಗೆ ಬಳಸುತ್ತಿದ್ದ ಆರೋಪ ಎದುರಿಸುತ್ತಿದ್ದು, ಕಳೆದ ಎಂಟು ದಿನಗಳಿಂದ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಅವಧಿಯಲ್ಲಿ ತನ್ನ ಬಳಿಯಿದ್ದ ಎರಡು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಸಂಪರ್ಕದಿಂದ ದೂರ ಉಳಿದಿದ್ದಾನೆ ಎನ್ನಲಾಗಿದೆ. ಇದೀಗ ಜುಲೈ 25ರಂದು ರಾತ್ರಿ ತನ್ನ ಆಪ್ತರ ನೆರವಿನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿರುವ ಮಾಹಿತಿ ತನಿಖಾ ಮೂಲಗಳಿಂದ ಲಭ್ಯವಾಗಿದೆ.

ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಹಾಗೂ ಆತನ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ, ಜಲೀಲ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

