ಕಾಸರಗೋಡು, ಜುಲೈ 27: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ತುಳು ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪ ಶ್ರೀ ವರ್ಕಾಡಿ ಅವರನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಾಗೂ ಚಲನಚಿತ್ರ ನಟ ಗಣೇಶ್ ಪಾವೂರು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಪಾವೂರು, “ಮಾಮಿಮರ್ಮೋಲ್ ಬ್ಯಾರಿ ಭಾಷೆಯ ಚಿತ್ರದಲ್ಲಿ ರೂಪ ಶ್ರೀ ವರ್ಕಾಡಿ ಅತ್ಯುತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದ ಗೌರವ ಲಭಿಸಿರುವುದು ತುಳು ಹಾಗೂ ಕರಾವಳಿ ಕಲಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.

ಗಣೇಶ್ ಪಾವೂರು ಅವರು ಇದೇ ಮಾಮಿಮರ್ಮೋಲ್ ಬ್ಯಾರಿ ಭಾಷೆಯ ಚಿತ್ರದಲ್ಲಿ ಸಮಾಜ ಸೇವಕನ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಹೀಮ್ ಉಚ್ಚಿಲ್ ನಿರ್ದೇಶಿಸಿದ್ದಾರೆ.

ನಿರ್ದೇಶಕ ರಹೀಮ್ ಉಚ್ಚಿಲ್ ಅವರ ಕಲಾತ್ಮಕ ದೃಷ್ಟಿ ಮತ್ತು ಚಿತ್ರ ನಿರ್ಮಾಣದ ಶೈಲಿಯನ್ನು ಶ್ಲಾಘಿಸಿದ ಗಣೇಶ್ ಪಾವೂರು, “ಮುಂದಿನ ದಿನಗಳಲ್ಲಿ ಅವರ ನಿರ್ದೇಶನದ ಚಿತ್ರಗಳಿಗೆ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಲಿ” ಎಂದು ಶುಭ ಹಾರೈಸಿದರು.
ಈ ಅಭಿನಂದನಾ ಸಂದೇಶದ ಮೂಲಕ ರೂಪ ಶ್ರೀ ವರ್ಕಾಡಿ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಗಣೇಶ್ ಪಾವೂರು, ಕರಾವಳಿ ಭಾಗದ ಕಲಾವಿದರಿಗೆ ಇದು ಮತ್ತಷ್ಟು ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

