ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎಂ. ಶ್ರೀಶಂಕರ್‌ಗೆ ಬೆಳ್ಳಿ ಪದಕ – ಐತಿಹಾಸಿಕ ದಾಖಲೆ ಬರೆದ ಭಾರತೀಯ ಅಥ್ಲೀಟ್

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಕೇರಳದ ಅಥ್ಲೀಟ್ ಎಂ. ಶ್ರೀಶಂಕರ್ ಬೆಳ್ಳಿ ಪದಕ ಗೆದ್ದಿದ್ದಾರೆ. 8.09 ಮೀಟರ್ ಜಿಗಿದು ಅವರು ಎರಡನೇ ಸ್ಥಾನ ಪಡೆದರು. 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್, ಇದೀಗ ಕಾಮನ್‌ವೆಲ್ತ್ ಲಾಂಗ್ ಜಂಪ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದೇ ವೇಳೆ, ಪ್ಯಾರಾ ಅಥ್ಲೆಟಿಕ್ಸ್‌ 100 ಮೀಟರ್ ಸ್ಪರ್ಧೆಯಲ್ಲಿ ಭಾರತದ ದಿಲೀಪ್ ಗಾವಿತ್ ಚಿನ್ನದ ಪದಕ ಗೆದ್ದರೆ, ಮೊಹಮ್ಮದ್ ಬಾಸಿಲ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.ಸತತ ಎರಡನೇ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಆದರೆ ಚಿನ್ನದ ಪದಕ ಗೆಲ್ಲುವ ಗುರಿ ಈಡೇರದ ಕಾರಣ ಸಂಪೂರ್ಣ ತೃಪ್ತಿ ಇಲ್ಲ ಎಂದು ಶ್ರೀಶಂಕರ್ ಹೇಳಿದರು.

“ನಮ್ಮ ಗುರಿ ಯಾವಾಗಲೂ ಚಿನ್ನದ ಪದಕವೇ. ಬೆಳ್ಳಿ ಪದಕ ಸಿಕ್ಕಿರುವುದು ಸಂತೋಷದ ಸಂಗತಿ. ಆದರೆ ನಾನು ನಿರೀಕ್ಷಿಸಿದ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ದೇಶಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲಬೇಕೆಂಬ ಆಸೆ ಇತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಪಡೆದಿದ್ದ ಬೆಳ್ಳಿ ಪದಕದ ಕೊರತೆಯನ್ನು ಈ ಬಾರಿ ಚಿನ್ನದ ಮೂಲಕ ನೀಗಿಸಬೇಕೆಂದು ಬಯಸಿದ್ದೆ.

ಕಳೆದ ಎರಡು ವರ್ಷಗಳಲ್ಲಿ ನಾನು ಎದುರಿಸಿದ ಸವಾಲುಗಳು ನನಗೆ ಮಾತ್ರ ಗೊತ್ತು. ಇಂತಹ ಸಂದರ್ಭದಲ್ಲೂ ದೇಶವನ್ನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದಕ್ಕೆ ನಾನು ತುಂಬಾ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು,” ಎಂದು ಶ್ರೀಶಂಕರ್ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!