ಮಂಗಳೂರು: ಕೇಂದ್ರ ಸರ್ಕಾರದ ಹಸಿಸುಳ್ಳುಗಳು, ನಿರಂತರ ಬೆಲೆಯೇರಿಕೆ ಹಾಗೂ ಸಾಲು ಸಾಲು ಅಕ್ರಮಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದೇಶಾದ್ಯಂತ ಸಾರ್ವಜನಿಕವಾಗಿ ತೀವ್ರವಾಗಿ ಕುಸಿಯುತ್ತಿದೆ. ಈ ನೈಜ ಮತ್ತು ಗಂಭೀರ ವಿಷಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶೆಯಿಂದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಬಿಜೆಪಿ ನಾಯಕರು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಚೋದನಕಾರಿ ಹಾಗೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.

ಇಂದು ದೇಶದ ಜನತೆ ಎದುರಿಸುತ್ತಿರುವ ನೈಜ ಸವಾಲುಗಳು ಬಯಲಾಗಿವೆ:
ನೀಟ್ (NEET) ಪರೀಕ್ಷಾ ಅಕ್ರಮ: ಲಕ್ಷಾಂತರ ಯುವಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದ ನೀಟ್ ಪರೀಕ್ಷೆಯ ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಕೇಂದ್ರ ಸರ್ಕಾರದ ದಕ್ಷತೆಯನ್ನು ಎತ್ತಿ ತೋರಿಸಿದೆ.

ಅಯೋಧ್ಯೆಯ ಹುಂಡಿ ಕಳ್ಳತನ: ಕೋಟ್ಯಂತರ ಭಕ್ತರ ಶ್ರದ್ಧೆಯ ಕೇಂದ್ರವಾದ ಅಯೋಧ್ಯೆಯ ಮಂದಿರದ ಹುಂಡಿಯಲ್ಲೇ ಕಳ್ಳತನವಾಗಿರುವುದು ಹಾಗೂ ಭ್ರಷ್ಟಾಚಾರದ ಆರೋಪಗಳು ಬಿಜೆಪಿಯ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.
ತಡೆರಹಿತ ಬೆಲೆಯೇರಿಕೆ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಹೊಟ್ಟೆ ಉರಿಯುತ್ತಿದೆ.

ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆಡಳಿತಾರೂಢ ಬಿಜೆಪಿ ನಾಯಕರು ಸಂಪೂರ್ಣವಾಗಿ ದಿಕ್ಕು ತೋಚದಂತಾಗಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಗೂಬೆ ಕೂರಿಸುವುದು ಮತ್ತು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಹೇಳಿಕೆ ನೀಡುವುದು ಶಾಸಕ ಯಶ್ಪಾಲ್ ಸುವರ್ಣ ಅವರ ವೈಚಾರಿಕ ದಾರಿದ್ರ್ಯವನ್ನು ತೋರಿಸುತ್ತದೆ.
ಜನಪ್ರತಿನಿಧಿಗಳಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಬಿಟ್ಟು, ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿಷಯಾಂತರ ಮಾಡುವ ಹತಾಶ ರಾಜಕಾರಣವನ್ನು ಬಿಜೆಪಿ ನಾಯಕರು ತಕ್ಷಣವೇ ನಿಲ್ಲಿಸಬೇಕು. ದೇಶದ ಜನರಿಗೆ ಹೊರೆಯಾಗಿರುವ ಬೆಲೆಯೇರಿಕೆ ಮತ್ತು ಅಕ್ರಮಗಳ ಬಗ್ಗೆ ಮೋದಿ ಸರ್ಕಾರ ಸ್ಪಷ್ಟನೆ ನೀಡಲಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಶ್ಪಾಲ್ ಸುವರ್ಣ ಕ್ಷಮೆ ಕೇಳಬೇಕು.


