ಬಾಲಕಿಯರಿಗೆ ಕಾನೂನು, ಆರೋಗ್ಯ ಜಾಗೃತಿ ಹಾಗೂ ಆತ್ಮಸ್ಥೈರ್ಯ: ‘ಬಾಲಿಕಾ ಜಾಗೃತಿ ಅಭಿಯಾನ-2026’ ಸಮಾರೋಪ

ಮಂಗಳೂರು, ಜು. 31: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಹಾಗೂ ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ ಒಂದು ತಿಂಗಳ ಕಾಲ ಮಂಗಳೂರಿನ ವಿವಿಧ ಶಾಲೆಗಳಲ್ಲಿ ನಡೆದ ‘ಬಾಲಿಕಾ ಜಾಗೃತಿ ಅಭಿಯಾನ-2026’ರ ಸಮಾರೋಪ ಸಮಾರಂಭ ಕುಂಜತ್ತಬೈಲ್‌ನ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಮಾರೋಪ ಸಮಾರಂಭಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಬಾಲಿಕಾ ಜಾಗೃತಿ ಅಭಿಯಾನ’ವು ಹೆಣ್ಣುಮಕ್ಕಳಿಗೆ ಕಾನೂನು ಅರಿವು, ಆರೋಗ್ಯ ಜಾಗೃತಿ ಹಾಗೂ ಆತ್ಮಸ್ಥೈರ್ಯವನ್ನು ಮೂಡಿಸುವ ಮೂಲಕ ಸಮಾಜದಲ್ಲಿ ಧೈರ್ಯದಿಂದ ಮುನ್ನಡೆಯಲು ಪ್ರೇರೇಪಿಸುವ ಶ್ರೇಷ್ಠ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶಿಶು ಮತ್ತು ಮಹಿಳಾ ಯೋಜನಾಧಿಕಾರಿ ಶ್ವೇತಾ ಎನ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಹೆಣ್ಣುಮಕ್ಕಳ ರಕ್ಷಣೆ, ಹಕ್ಕುಗಳು ಹಾಗೂ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಇಂದಿನ ಹೆಣ್ಣುಮಕ್ಕಳೇ ನಾಳಿನ ಬಲಿಷ್ಠ ಸಮಾಜದ ನಿರ್ಮಾತೃಗಳು. ಆದರೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಹಾಗೂ ಅವರ ಹಕ್ಕುಗಳ ಕುರಿತು ಅರಿವು ಮೂಡಿಸಲು ಇಂತಹ ಜಾಗೃತಿ ಅಭಿಯಾನಗಳು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.

ಕುಂಜತ್ತಬೈಲ್ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮೊಹಮ್ಮದ್ ಶಾರಿಕ್ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಕಾರ್ಪೊರೇಟರ್ ಶರತ್ ಕುಮಾರ್, ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಲತಾ ಪ್ರಸಾದ್ ಶೆಟ್ಟಿ ಹಾಗೂ ಪ್ರಚಲಿತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಸಂಸದ್ ಕುಂಜತ್ತಬೈಲ್ ಉಪಸ್ಥಿತರಿದ್ದರು.

ಅಭಿಯಾನದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ ದ.ಕ. ಬಾಲನ್ಯಾಯ ಮಂಡಳಿ ಸದಸ್ಯೆ ಸಚಿತ ನಂದಗೋಪಾಲ್, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ. ಸಂಸ್ಕೃತಿ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗ್ಡೆ ಹಾಗೂ ಮನೋರೋಗ ತಜ್ಞೆ ಹರ್ಷಿತ ಎಂ.ವಿ. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪ್ರಚಲಿತ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಹನಿಷ ಸವಾದ್ ಸ್ವಾಗತಿಸಿದರು. ಟ್ರಸ್ಟಿ ಕವಿತಾ ಶ್ರೀರಾಮ್ ವಂದಿಸಿದರು. ಸುರೇಖ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!