ನೀಟ್-ಯುಜಿ ಮರುಪರೀಕ್ಷೆ ಯಶಸ್ವಿ: ಕಠಿಣ ಪ್ರಶ್ನೆಪತ್ರಿಕೆ, ಬಿಗಿ ಭದ್ರತೆಯಲ್ಲಿ ಪರೀಕ್ಷೆ

ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಮರುಪರೀಕ್ಷೆ ರಾಜ್ಯಾದ್ಯಂತ ಬಿಗಿ ಭದ್ರತೆಯ ನಡುವೆ ಭಾನುವಾರ ಯಶಸ್ವಿಯಾಗಿ ನಡೆಯಿತು. ಪ್ರಶ್ನೆಪತ್ರಿಕೆ ಹಿಂದಿನ ಪರೀಕ್ಷೆಗಿಂತ ಹೆಚ್ಚು ಕಠಿಣವಾಗಿದ್ದು, ವಿಶೇಷವಾಗಿ ಭೌತಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಗೆ ಸವಾಲಾಗಿತ್ತು ಎಂದು ಪರೀಕ್ಷಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ದೇಶಾದ್ಯಂತ 22,79,743 ವಿದ್ಯಾರ್ಥಿಗಳಿಗಾಗಿ ಮರುಪರೀಕ್ಷೆ ಆಯೋಜಿಸಿತ್ತು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಅವಧಿಯನ್ನು 15 ನಿಮಿಷ ವಿಸ್ತರಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಿತು. ಹೆಚ್ಚುವರಿ ಸಮಯದಿಂದ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲವಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಎನ್‌ಟಿಎ ಈ ಬಾರಿ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿತ್ತು. ಬಯೋಮೆಟ್ರಿಕ್ ದೃಢೀಕರಣ, ದೈಹಿಕ ತಪಾಸಣೆ, ಸಿಸಿ ಕ್ಯಾಮೆರಾ ನಿಗಾ ಹಾಗೂ ವಿಶೇಷ ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಜೊತೆಗೆ ವಸ್ತ್ರಸಂಹಿತೆಯನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಆಭರಣಗಳು ಹಾಗೂ ನಿಷೇಧಿತ ವಸ್ತುಗಳಿಗೆ ಅವಕಾಶ ನೀಡಲಾಗಲಿಲ್ಲ.

ಇದೇ ವೇಳೆ ಆಕ್ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಿಗದಿತ ಸಮಯದ ಬಳಿಕ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಹಳೆಯ ಹಾಲ್ ಟಿಕೆಟ್ ತಂದಿದ್ದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಯಿತು. ಗೇಟ್ ಮುಚ್ಚಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರೂ, ಎನ್‌ಟಿಎ ನಿಯಮಗಳ ಹಿನ್ನೆಲೆಯಲ್ಲಿ ಸಿಬ್ಬಂದಿ ಅವಕಾಶ ನೀಡಲಿಲ್ಲ.

ಒಬ್ಬ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದ ಗೇಟ್ ಹಾರಿ ಒಳಗೆ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಪೋಷಕರು ಆಕೆಯನ್ನು ತಡೆದರು. ಮತ್ತೊಬ್ಬ ವಿದ್ಯಾರ್ಥಿ ಸಾರಿಗೆ ಸಮಸ್ಯೆಯಿಂದ ತಡವಾಗಿ ಆಗಮಿಸಿದ್ದರೆ, ಮಾಗಡಿ ಮೂಲದ ವಿದ್ಯಾರ್ಥಿನಿಯೊಬ್ಬರು ಹಳೆಯ ಹಾಲ್ ಟಿಕೆಟ್ ತಂದಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಕುಟುಂಬ ಸದಸ್ಯರೊಂದಿಗೆ ಮನೆಗೆ ಕಳುಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!