ಪೋಕ್ಸೋ, ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯಡಿ ಒಟ್ಟು ₹65 ಸಾವಿರ ದಂಡ
ಮಂಗಳೂರು, ಜು. 31: ಅಪ್ರಾಪ್ತ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ನಡೆಸಿ, ಆಕೆಯ ನಗ್ನ ಚಿತ್ರಗಳನ್ನು ಸಂಗ್ರಹಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹65 ಸಾವಿರ ದಂಡ ವಿಧಿಸಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 130/2025ರ ಪ್ರಕರಣದ ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಶಿಕ್ಷೆಗೆ ಗುರಿಯಾದವನು.
ಪ್ರಕರಣದ ವಿವರಗಳ ಪ್ರಕಾರ, ಆರೋಪಿ 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ಸಂಬಂಧ ಬೆಳೆಸಿ, ಆಕೆಯನ್ನು ಮನವೊಲಿಸಿ, ಶಕ್ತಿನಗರದ ಚಾಲುಕ್ಯ ಬಾರ್ ಸಮೀಪದ ಬಾಡಿಗೆ ಮನೆಯಲ್ಲಿ 2024ರ ಸೆಪ್ಟೆಂಬರ್‌ನಲ್ಲಿ ಹಾಗೂ ಅಳಪೆ ಗ್ರಾಮದ ಕೆಂಬಾರು ಕೆಇಬಿ ಮುಂಭಾಗದ ಮನೆಯೊಂದರಲ್ಲಿ 2024ರ ನವೆಂಬರ್‌ನಿಂದ 2025ರ ಜೂನ್‌ವರೆಗೆ ಪದೇಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.

ಅಲ್ಲದೆ, ಬಾಲಕಿ ಸ್ನಾನಗೃಹದಲ್ಲಿ ನಗ್ನವಾಗಿ ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೊ ಕಾಲ್ ಮಾಡಿ, ಆಕೆಯ ನಗ್ನ ಚಿತ್ರಗಳನ್ನು ಸ್ಕ್ರೀನ್‌ಶಾಟ್ ಮೂಲಕ ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದನು. ಮುಂದೆ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಬಾಲಕಿ, ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿತ್ತು.
ಕಂಕನಾಡಿ ನಗರ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಪ್ರಬಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಾನು ಕೆ.ಎಸ್. ಅವರು ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 6 ಹಾಗೂ ಬಿಎನ್‌ಎಸ್ ಕಲಂ 64(2)(m)ರಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದ್ದಾರೆ.
ಇದರ ಜೊತೆಗೆ ಬಿಎನ್‌ಎಸ್ ಕಲಂ 77ರಡಿ ಒಂದು ವರ್ಷ ಜೈಲು ಹಾಗೂ ₹5 ಸಾವಿರ ದಂಡ, ಪೋಕ್ಸೋ ಕಾಯ್ದೆಯ ಕಲಂ 15ರಡಿ ಒಂದು ವರ್ಷ ಜೈಲು ಹಾಗೂ ₹5 ಸಾವಿರ ದಂಡ ಹಾಗೂ ಐಟಿ ಕಾಯ್ದೆಯ ಕಲಂ 66(E)ರಡಿ ಒಂದು ವರ್ಷ ಜೈಲು ಹಾಗೂ ₹5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಒಟ್ಟಾರೆ ಆರೋಪಿಗೆ ₹65 ಸಾವಿರ ದಂಡ ವಿಧಿಸಲಾಗಿದೆ.


