ತುಳು, ಕೊಂಕಣಿ, ಬ್ಯಾರಿ, ಕೊಡವ ಸೇರಿದಂತೆ ಭಾಷಾ ಕೋರ್ಸ್ಗಳಿಗೂ ಅವಕಾಶ: ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್
ಮಂಗಳೂರು, ಜು. 31: ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಅಗತ್ಯ ಸರ್ಟಿಫಿಕೇಟ್ ಕೋರ್ಸ್ಗಳು ಹಾಗೂ ಗಲ್ಫ್ ಭಾಷೆಗಳ ಕಲಿಕಾ ಕೋರ್ಸ್ಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಹಾಗೂ ಕೊಡವ ಭಾಷೆಗಳಲ್ಲೂ ಸರ್ಟಿಫಿಕೇಟ್ ಕೋರ್ಸ್ಗಳನ್ನು ಎನ್ಸಿಬಿಇಟಿ ಕಾರ್ಯಕ್ರಮದಡಿ ಆರಂಭಿಸಬಹುದಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ 65 ಆನ್ಲೈನ್ ಮತ್ತು ದೂರ ಶಿಕ್ಷಣ (ಒಡಿಎಲ್) ಕೋರ್ಸ್ಗಳ ಪ್ರವೇಶಾತಿ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.
ಜುಲೈ ಆವೃತ್ತಿಯ ಪ್ರವೇಶಾತಿ ಜುಲೈ 22ರಿಂದ ಆರಂಭವಾಗಿದ್ದು, ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳ ಜೊತೆಗೆ ಪಿಜಿ ಸರ್ಟಿಫಿಕೇಟ್, ಯುಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕಾರ್ಯಕ್ರಮಗಳಿಗೂ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.
ಯುಜಿಸಿ ಅನುಮೋದಿತ ಕೋರ್ಸ್ಗಳಲ್ಲಿ ಬಿ.ಎ., ಬಿಕಾಂ., ಬಿಬಿಎ., ಬಿಸಿಎ., ಬಿಎಸ್ಡಬ್ಲ್ಯು., ಬಿಎಲ್ಐಎಸ್ಸಿ., ಬಿಎಡ್. (ಸಿಇಟಿ ಮೂಲಕ), ಬಿಎಸ್ಸಿ ಜನರಲ್, ಬಿಎಸ್ಸಿ ಐಟಿ, ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಲ್ಐಎಸ್ಸಿ., ಎಂಸಿಎ., ಎಂಎಸ್ಡಬ್ಲ್ಯು., ಎಂಎಸ್ಸಿ., ಎಂ.ಬಿಎ. ಸೇರಿದಂತೆ ವಿವಿಧ ಕೋರ್ಸ್ಗಳು ಸೇರಿವೆ.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಹೊರತುಪಡಿಸಿ ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ದೂರ ಮತ್ತು ಮುಕ್ತ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂಬ ಸರ್ಕಾರದ ಅಧಿಸೂಚನೆಯೂ ಇದೆ ಎಂದು ಕುಲಪತಿ ತಿಳಿಸಿದರು.


