ಮಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರು ಮೊಸಳೆ ದಾಳಿಯಿಂದ ಪಾರಾಗಿ ಬದುಕುಳಿದ ಅಚ್ಚರಿಯ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನವೆಂಬರ್ 4ರ ತಡರಾತ್ರಿ ನಡೆದಿದೆ.

ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಕುಮಾರಧಾರ ಸೇತುವೆ ಮೇಲಿಂದ ನದಿಗೆ ಹಾರಿದ್ದರು. ಈ ವೇಳೆ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ. ಮೊಸಳೆ ದಾಳಿಯಿಂದ ತೀವ್ರ ನೋವು ಹಾಗೂ ಭಯಗೊಂಡ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಿದ್ದಾರೆ.

ಮಹಿಳೆಯ ಆಕ್ರಂದನ ಕೇಳಿದ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ಟಾರ್ಚ್ ಹಿಡಿದು ನದಿ ದಂಡೆಗೆ ಧಾವಿಸಿದ್ದಾರೆ. ಜನರ ಚೀರಾಟ ಮತ್ತು ಚಲನವಲನದಿಂದ ಗಾಬರಿಗೊಂಡ ಮೊಸಳೆ ಮಹಿಳೆಯನ್ನು ಬಿಟ್ಟು ನೀರಿನಲ್ಲಿ ಮರೆಯಾಗಿದೆ. ತಕ್ಷಣ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಉಡುಪಿಯಿಂದ ಕುಕ್ಕೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ.

ಬಳಿಕ ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಕರೆಸಿದ ಪೊಲೀಸರು, ಸೂಕ್ತ ಕೌನ್ಸೆಲಿಂಗ್ ನಡೆಸಿ ಮಹಿಳೆಯನ್ನು ಕುಟುಂಬದವರೊಂದಿಗೆ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಮೊಸಳೆ ದಾಳಿಯಿಂದ ಉಂಟಾದ ಭಯ ಮತ್ತು ಮಹಿಳೆಯ ಚೀರಾಟವೇ ಸ್ಥಳೀಯರ ಗಮನ ಸೆಳೆದು ಆಕೆಯ ಜೀವ ಉಳಿಸಲು ಕಾರಣವಾಗಿರುವುದು ಈ ಘಟನೆಯ ವಿಶೇಷವಾಗಿದೆ.

