ರೋಟರಿ ಕ್ಲಬ್ ನಿಟ್ಟೆ, ವಲಯ–5, ರೋಟರಿ ಜಿಲ್ಲೆ–3182 ವತಿಯಿಂದ ಅಂತರರಾಷ್ಟ್ರೀಯ ಸ್ನೇಹ ದಿನಾಚರಣೆಯ ಅಂಗವಾಗಿ “ಸ್ನೇಹ ಸಮ್ಮಿಲನ 2026” ಕಾರ್ಯಕ್ರಮವನ್ನು 2026ರ ಜುಲೈ 30ರಂದು ನಿಟ್ಟೆಯ ನಂದಿನಿ ಸೆಮಿನಾರ್ ಹಾಲ್ನಲ್ಲಿ ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರು ವಹಿಸಿದ್ದರು. ಕ್ಲಬ್ನ ಸದಸ್ಯರು, ಅವರ ಕುಟುಂಬದವರು ಹಾಗೂ ಆಹ್ವಾನಿತ ಅತಿಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಸ್ನೇಹ, ಪರಸ್ಪರ ವಿಶ್ವಾಸ, ಸಹಕಾರ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಒತ್ತಿಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ, ರೋಟರಿಯಲ್ಲಿ ಸದಸ್ಯರ ನಡುವಿನ ಸ್ನೇಹ, ಸೇವಾ ಮನೋಭಾವ ಮತ್ತು ಪರಸ್ಪರ ಸಹಕಾರವೇ ಸಂಘಟನೆಯ ಯಶಸ್ಸಿನ ಮೂಲಾಧಾರವಾಗಿದ್ದು, ಇಂತಹ ಸ್ನೇಹ ಸಮ್ಮಿಲನಗಳು ಸದಸ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೊ. ರಾಘವೇಂದ್ರ ಅವರು ಸ್ನೇಹ, ಪ್ರೀತಿ ಹಾಗೂ ಪರಸ್ಪರ ಗೌರವದ ಮಹತ್ವದ ಕುರಿತು ಹೃದಯಸ್ಪರ್ಶಿ ಸಂದೇಶ ನೀಡಿದರು. ಉತ್ತಮ ಸ್ನೇಹವು ವ್ಯಕ್ತಿತ್ವ ವಿಕಸನ, ಕುಟುಂಬ ಸೌಹಾರ್ದತೆ ಹಾಗೂ ಸಮಾಜ ಸೇವೆಗೆ ಭದ್ರ ಅಡಿಪಾಯವಾಗಿದ್ದು, ರೋಟರಿಯ ಸೇವಾ ಚಟುವಟಿಕೆಗಳಿಗೆ ಸ್ನೇಹವೇ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
ಸಮಾಜಸೇವೆಯ ಅಂಗವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಹಾಗೂ ಮಧುಮೇಹದಿಂದ ಬಳಲುತ್ತಿದ್ದು ನಡೆಯಲು ತೀವ್ರ ತೊಂದರೆ ಅನುಭವಿಸುತ್ತಿರುವ ಶ್ರೀ ಕಿಟ್ಟು ಮೂಲ್ಯ ಅವರಿಗೆ ಅಗತ್ಯ ನೆರವಿನ ರೂಪವಾಗಿ ಟಾಯ್ಲೆಟ್ ಚೇರ್ ಅನ್ನು ಅವರ ಪತ್ನಿ ಶ್ರೀಮತಿ ಬೇಬಿ ಮೂಲ್ಯ ಅವರ ಮೂಲಕ ಹಸ್ತಾಂತರಿಸಲಾಯಿತು. ಈ ನೆರವು ಅವರ ದೈನಂದಿನ ಜೀವನವನ್ನು ಸುಲಭಗೊಳಿಸುವ ಉದ್ದೇಶದಿಂದ ನೀಡಲಾಯಿತು. ಫಲಾನುಭವಿಗಳ ಕುಟುಂಬವು ರೋಟರಿ ಕ್ಲಬ್ ನಿಟ್ಟೆಯ ಈ ಮಾನವೀಯ ಸೇವಾ ಕಾರ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿತು.
ಕಾರ್ಯಕ್ರಮದಲ್ಲಿ ರೊ. ಡಾ. ಸುರೇಶ್ ಶೆಟ್ಟಿ ಅವರ ಕುಟುಂಬದ ಸದಸ್ಯೆ ಹಾಗೂ ಮಾಜಿ ಇಂಟರ್ಯಾಕ್ಟ್ ಸದಸ್ಯೆ ಕುಮಾರಿ ಪ್ರಾರ್ಥನಾ ಶೆಟ್ಟಿ ಅವರನ್ನು ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು. ಅವರು ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ 600 ಅಂಕಗಳಲ್ಲಿ 597 ಅಂಕಗಳನ್ನು ಗಳಿಸಿ, ಕರ್ನಾಟಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಅಪೂರ್ವ ಸಾಧನೆ ಮಾಡಿದ್ದಾರೆ. ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ನಿಟ್ಟೆಯ ವತಿಯಿಂದ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯರು ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ರೊ. ಶಶಿಕಲಾ ಅವರು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಉತ್ಸಾಹಭರಿತವಾಗಿ ನಿರ್ವಹಿಸಿದರು. ಅವರು ರೋಟೇರಿಯನ್ಗಳು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಹಲವು ಮನರಂಜನಾತ್ಮಕ ಹಾಗೂ ಆಸಕ್ತಿದಾಯಕ ಆಟಗಳನ್ನು ಆಯೋಜಿಸಿ ಎಲ್ಲರನ್ನು ಉತ್ಸಾಹದಿಂದ ಭಾಗವಹಿಸುವಂತೆ ಮಾಡಿದರು. ಆಟಗಳು, ನಗು, ಸಂತೋಷ ಮತ್ತು ಪರಸ್ಪರ ಸಂವಾದಗಳ ಮೂಲಕ ಸ್ನೇಹ ಸಮ್ಮಿಲನವು ಇನ್ನಷ್ಟು ಆತ್ಮೀಯ ಹಾಗೂ ಸ್ಮರಣೀಯವಾಗಿತು.

