ಮಂಗಳೂರು: ಕಾಲುಸಂಕ ದಾಟುವಾಗ ತೋಡಿಗೆ ಬಿದ್ದು ವ್ಯಕ್ತಿ ಕೊಚ್ಚಿಹೋದ ಶಂಕೆ; ಎನ್‌ಡಿಆರ್‌ಎಫ್ ಶೋಧ ಮುಂದುವರಿಕೆ

ಮಂಗಳೂರು: ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಧಾರಾಕಾರ ಮಳೆಯ ನಡುವೆ ಕಾಲುಸಂಕ ದಾಟುತ್ತಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ಅವರ ಪತ್ತೆಗಾಗಿ ಎನ್‌ಡಿಆರ್‌ಎಫ್ (NDRF) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ದಿನವಿಡೀ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ರಾಯಿ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ ಜೀವನ್ ಪಿಂಟೋ (48) ನಾಪತ್ತೆಯಾದ ವ್ಯಕ್ತಿ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜೀವನ್ ಅವರು ಕೆಲ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಇದೇ ಆಗಸ್ಟ್ ತಿಂಗಳಿನಲ್ಲಿ ಮರಳಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆಗಸ್ಟ್ 1ರ ಶನಿವಾರ ರಾತ್ರಿ ಸುಮಾರು 7.30ರ ವೇಳೆಗೆ ಧಾರಾಕಾರ ಮಳೆ ಹಾಗೂ ಕತ್ತಲಿನಲ್ಲಿ ಟಾರ್ಚ್ ಹಿಡಿದುಕೊಂಡು, ಮನೆ ಸಮೀಪದ ಮಾವನ ಮನೆಗೆ ಹೊರಟಿದ್ದರು. ಮಾರ್ಗಮಧ್ಯೆ ತೋಡಿನ ಮೇಲಿದ್ದ ಮರದ ಕಾಲುಸಂಕ ದಾಟುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಅವರು ಮಾವನ ಮನೆಗೆ ತಲುಪದೇ ಇದ್ದಾಗ ಕುಟುಂಬಸ್ಥರು ಶೋಧ ನಡೆಸಿದ್ದು, ತೋಡಿನ ಬಳಿ ಜೀವನ್ ಅವರ ಚಪ್ಪಲಿ ಹಾಗೂ ಟಾರ್ಚ್ ಪತ್ತೆಯಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಶನಿವಾರ ರಾತ್ರಿಯಿಂದಲೇ ಹುಡುಕಾಟ ಆರಂಭಿಸಿದ್ದು, ಭಾನುವಾರ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಆದರೆ, ರಭಸವಾಗಿ ಹರಿಯುತ್ತಿರುವ ನೀರು ಹಾಗೂ ಮಳೆಯಿಂದಾಗಿ ಸಂಜೆಯವರೆಗೂ ಜೀವನ್ ಪಿಂಟೋ ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!