ಬಂಟ್ವಾಳ: ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದರೂ, ಕೇವಲ ಒಂದು ವಾರ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗಗಳ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳಲು ಆರಂಭಿಸಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಅವಧಿಗೂ ಮುನ್ನ ಆರಂಭವಾದ ಭಾರೀ ಮಳೆ ಮತ್ತು ನಿರಂತರ ಮಳೆಯ ಪರಿಣಾಮ ತಾಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಹರಡಿತ್ತು. ಇದರಿಂದ ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದರು. ನಿರಂತರ ಮಳೆಯಿಂದಾಗಿ ತೋಟಗಳಿಗೆ ತೆರಳಿ ಬೋರ್ಡ್ ದ್ರಾವಣ ಸಿಂಪಡಣೆ ಮಾಡಲೂ ಸಾಧ್ಯವಾಗದೆ ರೋಗ ನಿಯಂತ್ರಣ ಕಷ್ಟಕರವಾಗಿತ್ತು.

ಈ ಬಾರಿ ಮಳೆಯ ಪ್ರಮಾಣ ಕಡಿಮೆಯಿರುವುದರಿಂದ ಅಡಿಕೆಗೆ ಕೊಳೆರೋಗ ಬರುವ ಸಾಧ್ಯತೆ ಕಡಿಮೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ ಈಗಾಗಲೇ ಕೆಲವು ತೋಟಗಳಲ್ಲಿ ರೋಗ ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ.
ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ವಿನೋದ್ ಬೊಳ್ಳುಕಲ್ಲು, ನಾರಾಯಣ ಮೂಲ್ಯ, ವೆಂಕಪ್ಪ ಮೂಲ್ಯ, ರುಕ್ಮಯ ಪೂಜಾರಿ ಹಾಗೂ ಯಶೋಧರ ಗೌಡ ಸೇರಿದಂತೆ ಹಲವು ರೈತರ ಅಡಿಕೆ ತೋಟಗಳಲ್ಲಿ ಕೊಳೆರೋಗದ ಲಕ್ಷಣಗಳು ಕಂಡುಬಂದಿವೆ. ವಿಶೇಷವೆಂದರೆ, ಮಳೆ ಕಡಿಮೆಯಿದ್ದರೂ ಮುಂಜಾಗ್ರತಾ ಕ್ರಮವಾಗಿ ಎರಡು ಬಾರಿ ಬೋರ್ಡ್ ದ್ರಾವಣ ಸಿಂಪಡಣೆ ಮಾಡಿದ್ದ ತೋಟಗಳಲ್ಲಿಯೇ ರೋಗ ಕಾಣಿಸಿಕೊಂಡಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜೊ. ಪ್ರದೀಪ್ ಡಿ. ಸೋಜ ಅವರು, “ಈ ವರ್ಷ ತಾಲೂಕಿನ ಯಾವುದೇ ಭಾಗದಿಂದ ಅಡಿಕೆ ಕೊಳೆರೋಗದ ಬಗ್ಗೆ ಮಾಹಿತಿ ಬಂದಿರಲಿಲ್ಲ. ಇದು ಈ ಸಾಲಿನ ಮೊದಲ ಮಾಹಿತಿ. ಮಳೆಯ ಪ್ರಮಾಣ ಕಡಿಮೆಯಿರುವುದರಿಂದ ವ್ಯಾಪಕವಾಗಿ ಕೊಳೆರೋಗ ಹರಡುವ ಸಾಧ್ಯತೆ ಕಡಿಮೆ. ಆದಾಗ್ಯೂ, ಮಾಹಿತಿ ಬಂದಿರುವ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಹೆಚ್ಚು ಪ್ರಮಾಣದಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದ ತೋಟಗಳಲ್ಲಿ ರೋಗದ ಕ್ರಿಮಿಗಳು ಅಡಿಕೆ ಬುಡದಲ್ಲಿ ಉಳಿದುಕೊಂಡಿರುವ ಸಾಧ್ಯತೆ ಇದ್ದು, ಅಂತಹ ತೋಟಗಳಲ್ಲಿ ಈ ವರ್ಷವೂ ರೋಗ ಕಾಣಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ರೈತರು ತೋಟಗಳ ಮೇಲೆ ನಿರಂತರ ನಿಗಾ ವಹಿಸಿ, ರೋಗದ ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣ ತೋಟಗಾರಿಕೆ ಇಲಾಖೆಯ ಸಲಹೆಯಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ.
ಹಿರಿಯ ಕೃಷಿಕ ರಾಜ ಬಂಟ್ವಾಳ ಹೇಳುವ ಪ್ರಕಾರ ಹವಮಾನ ವೈಪರೀತ್ಯಗಳಿಂದಾಗಿ ಈ ಬಾರಿ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಂಡು ಬಂದಿದೆ.
ಮಳೆ ಬಿಸಲು ಕಣ್ಣು ಮುಚ್ಚಾಲೆಯ ಆಟದಲ್ಲಿ ಕ್ರಿಮಿಗಳು ಜೀವಪಡೆದುಕೊಂಡಿವೆ ಎಂದು ಅವರು ಹೇಳುತ್ತಾರೆ.
ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಕೊಳೆರೋಗ ಕಂಡು ಬಂದಿವೆ. ನರಿಕೊಂಬು ಭಾಗದ ಅನೇಕ ತೋಟಗಳಲ್ಲಿ ರೋಗ ಇದ್ದು, ನನ್ನ ಅಡಿಕೆ ತೋಟದಲ್ಲಿಯೂ ರೋಗ ಇದೆ ಎಂದು ತಿಳಿಸಿದ್ದಾರೆ.

